ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಹ ರಾಶಿಯವರಿಗೆ ಶನಿಮಹಾತ್ಮನ ಅಭಯಹಸ್ತ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಮಘಾ, ಪೂರ್ವ ಮತ್ತು ಉತ್ತರ ಫಾಲ್ಗುಣಿ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದವರು ಸಿಂಹ ರಾಶಿಯವರಾಗಿರುತ್ತಾರೆ. ಏಳರಾಟದಿಂದ ಶನಿದೇವನು ಇವರಿಗೆ ಕಳೆದ 2 ವರ್ಷದ ಹಿಂದೆ ಬಿಡುಗಡೆ ಮಾಡಿದ್ದಾನೆ (ತುಲಾ ರಾಶಿಯವರಿಗೆ ಶನಿದೇವನು ಮುಂದಿನ ದಿನಗಳಲ್ಲಿ 2ನೇ ಸ್ಥಾನಕ್ಕೆ ಬರುತ್ತಾನೆ). ಈಗ ಶನಿರಾಯನು ತೃತೀಯ ಸ್ಥಾನದಲ್ಲಿದ್ದು ಭಾರಿ ಪ್ರಮಾಣದ ಲಾಭಗಳನ್ನು ನೀಡುತ್ತಿದ್ದಾನೆ (ಮುಂದಿನ ದಿನಗಳಲ್ಲಿ ಕನ್ಯಾ ರಾಶಿಯವರಿಗೆ ಮಹಾತ್ಮನು ತೃತೀಯವನಾಗಲಿದ್ದಾನೆ). ಆದರೆ, ಮುಂದಿನ ದಿನಗಳಲ್ಲಿ ಶನಿರಾಜನು ಸಿಂಹ ರಾಶಿಯವರಿಗೆ ಅರ್ಧಾಷ್ಟಮನಾಗಲಿದ್ದಾನೆ. (ಈಗ ಕರ್ಕ ರಾಶಿಯವರಿಗೆ ಅರ್ಧಾಷ್ಟಮ ಶನಿಕಾಟವಿದೆ).

ಹೀಗಾಗಿ ಹನುಮಾನ್ ಚಾಲೀಸಾ ಪಠಣ ಮಾಡುತ್ತ ಶನಿರಾಯನನ್ನು ಒಲಿಸಿಕೊಳ್ಳಲು ಈಗ್ಲಿಂದಲೇ ಆರಂಭಿಸಬೇಕು. ಏಕೆಂದರೆ ಎಷ್ಟೋ ಜನರು ಸುಖದ ಸಮಯದಲ್ಲಿ ಮಹಾತ್ಮನನ್ನೇ ಮರೆತಿರುತ್ತಾರೆ. ಕಷ್ಟಗಳು ಶುರುವಾದಾಗ "ದೇವರೆಲ್ಲಿದ್ದಾನೆ" ಎಂದು ಹಗಲು-ರಾತ್ರಿ ಹುಡುಕಲಾರಂಭಿಸುತ್ತಾರೆ!

ಸಿಂಹರಾಶಿಯವರಿಗೆ ಈ ಸಮಯವು ತುಂಬಾ ಒಳ್ಳೆಯದೆಂದು ಹೇಳಬಹುದು. ಏಕೆಂದರೆ ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯವಿದು. ಆದರೆ, ಒಂದು ಮಾತು. ಮುಂದಿನ ನಮ್ಮ ಸಮಯದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂದು ಗೊತ್ತಿದ್ದರೆ, ನಾವೇನೇನನ್ನ ಮುಟ್ಟಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳುವವನೇ ಬುದ್ಧಿವಂತ. ಅದೇ ರೀತಿ ಕೆಟ್ಟ ಸಮಯವಿದ್ದಾಗ ಮುಟ್ಟಿದ್ದೆಲ್ಲ ಮಣ್ಣಾಗುತ್ತಿರುವುದಿಂದ ಏನೇನು ಮುಟ್ಟಬಾರದು ಎಂಬುದನ್ನು ಕೂಡ ಪಟ್ಟಿ ಮಾಡಿಟ್ಟುಕೊಳ್ಳಬೇಕು.

Sade Sati : Shani effect on Leo zodiac sign

ಇದರರ್ಥ, ಒಳ್ಳೆಯ ಸಮಯದಲ್ಲಿ ಸ್ವಂತ ಏಳ್ಗೆಯ ಕೆಲಸ ಕಾರ್ಯ ಮಾಡಬೇಕು. ಕೆಟ್ಟ ಸಮಯದಲ್ಲಿ ಯಾವುದೇ ದೊಡ್ಡ ನಿರ್ಧಾರ, ಹೂಡಿಕೆ ಮಾಡಬಾರದು. ಜೀವನದ ಮೆಟ್ಟಿಲುಗಳನ್ನು ಕಷ್ಟಪಟ್ಟು ಹತ್ತಿ ಬಂದಿರುವ ಸಂತಸ ಒಂದೆಡೆಯಾದರೆ, ಕಷ್ಟಪಟ್ಟಿದ್ದಕ್ಕೆ ಸಿಕ್ಕ ಫಲದಿಂದ ಜೀವನ ಸಾರ್ಥಕವಾಯಿತಲ್ಲಾ ಎಂದು ಸಮಾಧಾನ ಪಡುತ್ತ ಆನಂದಿಸುವ ಸಮಯವಿದು ಸಿಂಹ ರಾಶಿಯವರಿಗೆ.

2 ವರ್ಷಗಳಿಂದ ಸಿಂಹ ರಾಶಿಯವರು ಜೀವನದಲ್ಲಿ ಏನೇನು ಸಾಧಿಸಬೇಕು, ಏನೇನು ಮಾಡಬೇಕು ಎಂದು ಅಂದುಕೊಂಡಿದ್ದನ್ನು ಉತ್ತಮವಾಗಿ ಮಾಡುತ್ತಿದ್ದಾರೆ. ಹರೆಯದ ವಯಸ್ಸಿನವರಿಗೆ ಮಧುರ ಘಟನೆಗಳಿಂದ ಹಾಗೂ ಹಣದ ಅನುಕೂಲತೆಯಿಂದ "ಸ್ವರ್ಗ ಮೂರೇ ಗೇಣು" ಎನ್ನುವಂತಾಗಿದೆ. ಬಯಸಿ, ಇಷ್ಟಪಟ್ಟು, ಕಷ್ಟಪಟ್ಟು ಪಡೆದುಕೊಂಡ ಕೆಲಸವನ್ನು ಆನಂದವಾಗಿ ಮಾಡುತ್ತಿರುವುದರಿಂದ, ಶಹಬ್ಬಾಸ್‌ಗಿರಿ ಎಲ್ಲರಿಂದ ಬಹುಮಾನವಾಗಿ ಸಿಗುವ ಕಾಲವಿದು. ಏಕೆಂದರೆ ಶನಿದೇವನು ಸಾಡೇಸಾತಿಯಲ್ಲಿ ಎಲ್ಲ ಕಲಿಸಿ ಹೋಗಿದ್ದಾನೆ. ಮತ್ತೆ ಅವನು ಬರುವುದು 30 ವರ್ಷಗಳ ನಂತರವೇ ಸಿಂಹ ರಾಶಿಗೆ. ಅಲ್ಲಿಯವರೆಗೂ ಆರಾಮವಾಗಿ ಇರಬಹುದು. ಆದರೆ ಮಧ್ಯದಲ್ಲಿ ಅಷ್ಟಮ ಮತ್ತು ಪಂಚಮಶನಿಯಾಗಿ ಬರುವುದರಿಂದ ಯಾವುದೇ ಅಧರ್ಮದ ಕೆಲಸ ಮಾಡದೆ ಶುದ್ಧವಾಗಿರಬೇಕು. ಯಾರಿಗೂ ಅನ್ಯಾಯ ಮಾಡದೇ ಇದ್ದರೆ ಶನಿದೇವನು ಭಯಂಕರ ಕಷ್ಟ ನೀಡುವುದಿಲ್ಲ.

ಸಕ್ರಿ ಇತ್ತಂದ್ರ ಇರವಿ ಬರ‍್ತಾವ್ : ದೀಪಾವಳಿ ಅಮವಾಸ್ಯೆಯಂದು ಶ್ರೀಚಕ್ರ ಮತ್ತು ಕುಬೇರ ಮೂರ್ತಿಯನ್ನು ವಿಧಿವತ್ತಾಗಿ ಮನೆಯಲ್ಲಿ ಪೂಜಿಸುವುದರಿಂದ ಹೇಗೆ ಧನದ ಹರಿವು ಶುರುವಾಗುತ್ತದೆಯೋ, ಅದೇ ರೀತಿ ಈಗ ಸಿಂಹ ರಾಶಿಯವರ ಸಮಯವಾಗಿದೆ. ಈಗ ಸಮಯಸಾಧಕರೆನಿಸಿಕೊಂಡವರು ಸಿಂಹ ರಾಶಿಯವರ ಹತ್ತಿರ ಸಹಾಯ ಬಯಸಿ ಬರುತ್ತಿರುತ್ತಾರೆ. "ಸಕ್ರಿ ಇತ್ತಂದ್ರ ಇರವಿ ಬರ‍್ತಾವ್, ರೊಕ್ಕಾ ಐತೆಂದ್ರ ಮನಷ್ಯಾರ್ ಬರ‍್ತಾರ್" ಎಂಬ ಮಾತು ಸಿಂಹ ರಾಶಿಯವರು ಈಗ ಪರೀಕ್ಷಿಸಬಹುದು.

ಆರೋಗ್ಯ ಪವಾಡವೆಂಬಂತೆ ಸುಧಾರಣೆಯಾಗಿ ಉತ್ಸುಕತೆಯಿಂದ ದೇಹ ಪುಟಿಯುತ್ತಿರುತ್ತದೆ. ಒಂಥರಾ ತ್ರಿವಿಕ್ರಮನೇ ನಾನು ಎಂದುಕೊಂಡು ಬೀಗಬೇಕಾದ ಸಮಯವಿದು ಸಿಂಹದವರಿಗೆ. ಕೆಲವರಿಗೆ ಸ್ವಂತ ಮನೆ, ಕಾರು ಕೊಳ್ಳುವ ಯೋಗವಿದು. ಇವರನ್ನು ನೋಡಿ ಹೊಟ್ಟೆಕಿಚ್ಚಿನ ಜನರು "ಹೇಗಿದ್ದವನು, ಹೇಗಾದ್ನನಲ್ಲಪಾ" ಎಂದು ಗೊಣಗುತ್ತ ಇವರ ಸುದ್ದಿಯನ್ನೇ ಮಾತನಾಡುತ್ತಿರುತ್ತಾರೆ. ಇದಕ್ಕೇನೆ ಶನಿರಾಯನ ಕೃಪಾಕಟಾಕ್ಷವಾಗಿದೆ ಎನ್ನುವುದು. ಈಗ ಸಿಂಹ ರಾಶಿಯವರಿಗೆ ಶನಿಮಹಾತ್ಮನ ಅಭಯಹಸ್ತವಿದೆ.

ಶನಿದೇವನ ಭಯವಿಲ್ಲದೆ, ಯಾರದೋ ಬಲದಿಂದ ಸ್ವಂತ ಜಾಲ ಹೊಂದಿ ತಾವೇ ಬಲಾಢ್ಯರೆಂದು ಮೆರೆಯುತ್ತಿರುವ ಕೆಟ್ಟವರ ರಾಶಿಗೆ ಶನಿಮಹಾತ್ಮನ ಕುದೃಷ್ಟಿ ಬಿತ್ತೆಂದರೆ ಆಟ ಮುಗಿತು. ಸ್ವತಃ ಶನಿಮಹಾತ್ಮನೇ ಉಪಾಯದಿಂದ ಬಲೆ ಬೀಸಿ ಅವರನ್ನು ಸದೆಬಡಿಯುತ್ತಾನೆ. ಮುಖ ಕೂಡ ತೋರಿಸಲಾಗದಂತಾಗುತ್ತಾರೆ ಅಂಥವರು. ಕೆಲವರಂತು ಪತ್ತೇನೆ ಆಗಲ್ಲ! ಎಲ್ಲೋ ಒದ್ದೋಡಿಸಿರುತ್ತಾನೆ ಶನಿಮಹಾತ್ಮ.

ಒಳ್ಳೆಯತನದಿಂದ ಬಾಳುತ್ತಿರುವ ಸುಂದರ ಕುಟುಂಬದವರ ಜೀವನಚಕ್ರದಲ್ಲಿ ಏನಾದರೂ ಏರುಪೇರು ಮಾಡಿದ್ದರೆ ಮುಗೀತು. ಅಂಥವರನ್ನು ಚಕ್ರವ್ಯೂಹದಂಥ ಸಮಸ್ಯೆಗಳಲ್ಲಿ ಸಿಲುಕಿಸಿ ಒದೆಯುತ್ತ, ವಿಲವಿಲ ಒದ್ದಾಡಿಸುತ್ತಾನೆ ಶನಿಮಹಾತ್ಮನು. ಆದ್ದರಿಂದ ಮತ್ತೊಬ್ಬರ ಬಗ್ಗೆ ಕೆಟ್ಟದ್ದನ್ನು ಮಾಡುವಾಗ ಹತ್ತಾರು ಸಲ ಯೋಚನೆ ಮಾಡಬೇಕು. ಏನಾದರೂ ಕೆಟ್ಟದ್ದನ್ನು ಮಾಡಿದ್ದರೆ ಶನಿದೇವನಿಂದ ಕ್ಷಮೆಯೆಂಬುದೇ ಇಲ್ಲ. ಅನುಭವಿಸಲೇಬೇಕು.

ಕೆಲವರಿರುತ್ತಾರೆ. ನಾನು ಸಾಕಷ್ಟು ದುಡ್ಡು ಕೊಟ್ಟು ಪೂಜೆ, ಹೋಮ, ಹವನ ಎಲ್ಲಾ ಮಾಡಿಸಿದ್ದೇನೆ. ನನಗೇನೂ ಆಗೋದಿಲ್ಲ ಎಂದು ಆರಾಮಾಗಿದ್ದು ಬಿಟ್ಟಿರುತ್ತಾರೆ. ಆದರೆ ಮಜವಾದ ವಿಷಯವರೆಂದರೆ, ಶನಿದೇವನು ಇಂಥವರನ್ನೇ ಹುಡುಕಿ, ಹುಡುಕಿ ಮತ್ತಷ್ಟು ಸಂಕಷ್ಟಕ್ಕೀಡು ಮಾಡುತ್ತಾನೆ. ಮಾಡೋದೆಲ್ಲಾ ಮಾಡಿ, ಪೂಜೆ ಮಾಡಿದ್ದೇನೆ ನನ್ನ ಪಾಪವೆಲ್ಲಾ ಪರಿಹಾರವಾಯ್ತು ಎಂದುಕೊಂಡು ಬೀಗುವವರನ್ನು ಬಿಡುವುದೇ ಇಲ್ಲ ಮಹಾತ್ಮನು. "ಒಂದ ಗೂಗಿ ಗುಕ್ಕಾ" ಎನ್ನಿಸಿಕೊಳ್ಳುವ ಹಾಗೆ ಮಾಡಿ ಬಿಡುತ್ತಾನೆ.

ಅದಕ್ಕೆಂದೇ ಶನಿದೇವನನ್ನು ಸಂಪ್ರೀತಗೊಳಿಸುವ ಬಗೆ ತಿಳಿದುಕೊಂಡು ಅವನನ್ನು ಶಾಂತಗೊಳಿಸಬೇಕು. ಯಾವ ದೇವರ ಕೃಪೆಯಾಗಲಿ ಬಿಡಲಿ, ಮೊದಲು ಶನಿದೇವನ ಕೃಪೆ ಪಡೆದುಕೊಳ್ಳುವವರು ಸುಖದಿಂದ ಜೀವನ ಸಾಗಿಸುತ್ತಾರೆ. ಸುಮ್ಮನೆ ಅವರು ಹೇಳಿದ್ರು, ಇವರು ಹೇಳಿದ್ರು ಅಂತಾ ಏನೇನೋ ಮಾಡಿ ಕಷ್ಟಗಳೇ ಪರಿಹಾರವಾಗುತ್ತಿಲ್ಲವಲ್ಲ ಎಂದು ಗೊಣಗುವವರೇ ಇಂದು ಜಾಸ್ತಿಯಾಗುತ್ತಿದ್ದಾರೆ. ಮಹಾತ್ಮನ ಕೃಪೆ ಪಡೆದುಕೊಳ್ಳಲು ಜಾತಕ ಪರಿಶೀಲಿಸಿದರೆ ಮಾತ್ರ ಗೊತ್ತಾಗೋದು ಎಂಬುದು ಇವರಿಗೆ ಗೊತ್ತೇ ಇರುವುದಿಲ್ಲ.

ಆದರೆ, ಶನಿಕಾಟದಲ್ಲಿರುವವರು ಹೆದರದೇ ಧೈರ್ಯದಿಂದ ಜೀವನ ಸಾಗಿಸಬೇಕು. "ಭಂಡ ಬದುಕಿದ, ಛಲಗಾರ ಸತ್ತ" ಎಂಬ ಮಾತಿನ ಅರ್ಥ ನಿಮಗೊತ್ತಿಲ್ಲದಿದ್ದರೆ, ಇದರರ್ಥವನ್ನು ಶನಿದೇವನು ತನ್ನ ಕಾಡಾಟದಲ್ಲಿ ಮನವರಿಕೆ ಮಾಡಿಸುತ್ತಾನೆ. ಅರ್ಥ ಮಾಡಿಕೊಳ್ಳಿ.

"ಶನಿಶಕ್ತಿ ; ಕನ್ಯಾ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ದೇವರ ಮನೆಯಲ್ಲಿನ ಶ್ರೀಚಕ್ರ, ಕುಬೇರ ಮೂರ್ತಿ, ಶಂಖದ ಎದುರಿಗೆ ದೀಪ ಹಚ್ಚುತ್ತಿರಬೇಕು.

ಶನಿದೇವನ ಕೃಪೆಗೆ : ಶನಿಗ್ರಹದ ಯಂತ್ರವನ್ನು ಪ್ರತಿ ಶನಿವಾರ ಪೂಜಿಸಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 34 : Impact of Sade Sati on zodiac signs. Lord Shani is favouring Leo zodiac sign people right now. Whatever they touch will turn into gold. At the same time Leo people have to be watchful and should not fail to take advantage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X