ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿಶಕ್ತಿ : ಮಿಥುನ ರಾಶಿಗೆ ಹೀಗಿದೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಆರಿದ್ರಾ, ಪುನರ್ವಸು 1, 2, 3 ಹಾಗೂ ಮೃಗಶಿರಾ, 3, 4ನೇ ಪಾದದ ನಕ್ಷತ್ರಗಳಲ್ಲಿ ಜನಿಸಿದವರು ಮಿಥುನ ರಾಶಿಯವರಾಗಿರುತ್ತಾರೆ. ಈ ಹಿಂದೆ ಅರ್ಧಾಷ್ಟಮ ಶನಿ ಕಾಟದಲ್ಲಿದ್ದ ಇವರಿಗೆ ಈಗ ಮಹಾತ್ಮನು ಪಂಚಮದಲ್ಲಿದ್ದಾನೆ. ಮುಂದಿನ ದಿನಗಳಲ್ಲಿ ಮಹಾತ್ಮನು ಇವರಿಗೆ 6ನೇಯವನಾಗಿ ತುಂಬಾ ಒಳ್ಳೆಯದನ್ನು ಮಾಡುತ್ತಾನೆ. ಆದರೆ ಈ ಸಮಯದಲ್ಲಿ ಸಂಸಾರದಲ್ಲಿ ಏರುಪೇರು ಹೆಚ್ಚಾಗಿರುವುದರಿಂದ ಏನೇ ಮಾಡಿದರೂ ಚಿಂತೆಗಳು ಕಮ್ಮಿಯಾಗುವುದಿಲ್ಲ. ಚಿಂತಿಸುವುದೊಂದೇ ಉದ್ಯೋಗವಾಗಿರುತ್ತದೆ ಇವರಿಗೆ ಈಗ.

ಮಕ್ಕಳಿಂದಲೂ ಚಿಂತೆಗಳು ಹೆಚ್ಚುತ್ತಿರುತ್ತವೆ. ಮನೆಯಲ್ಲಿನ ಎಲ್ಲರೂ ಇವರೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಹೊರಗಡೆ ಬೇಕಾದ್ದಂತಹ ಹೆಸರಿದ್ದರೂ, ಮನೆಯಲ್ಲಿ ಮಾತ್ರ ಜಗಳವಿಲ್ಲದೆ ಊಟವಿಲ್ಲ ಎಂಬಂತಾಗಿರುತ್ತದೆ. ಅನಾರೋಗ್ಯವೂ ಇದರೊಂದಿಗೆ ಬಳುವಳಿಯಾಗಿ ಬಂದು ಬಿಟ್ಟಿರುತ್ತದೆ. ಕಾಸಿಲ್ಲದೆ ಅವರಿವರ ಬಳಿ ಕೈಯೊಡ್ಡಬೇಕಾಗುತ್ತದೆ. ಸುಲಭವಾಗಿ ಹಣ ಗಳಿಸಲು ದಾರಿ ಹುಡುಕುತ್ತ ಇದ್ದಬದ್ದ ಹಣ ಖಾಲಿ ಮಾಡಿಕೊಂಡು ಮನೆಮಂದಿ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಯಾವುದೆ ವ್ಯವಹಾರ ಮಾಡುವುದು ಬೇಡ. ಸಿಟ್ಟನ್ನು ಆದಷ್ಟು ಹಿಡಿತದಲ್ಲಿಟ್ಟುಕೊಂಡರೆ ಒಳ್ಳೆಯದು. ಮಾಸ್ಟರ್‌ಮೈಂಡ್ ತರಹ ಯೋಚನೆ ಮಾಡಿ ಎಲ್ಲೆಲ್ಲೋ ಹಣ ಹೂಡಿಕೆ ಮಾಡದೇ, ತಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳಿಲ್ಲದವರು ಅಂದರೆ ಮದುವೆಯಾಗದವರು ತಮ್ಮ ಬಗ್ಗೆನೆ ಕಾಳಜಿ ವಹಿಸಿಕೊಳ್ಳುವುದುತ್ತಮ.

Sade Sati : Shani effect on Gemini zidiac sign

ನಿಮಗೆ ಗೊತ್ತಿರಬಹುದು, ಕೆಲವರು ಅಡುಗೆ ಮಾಡಿದರೆ ಬೆರಳು ಕಚ್ಚಿ ತಿನ್ನಬೇಕು ಅನ್ನಿಸುತ್ತದೆ. ಅಷ್ಟೊಂದು ರುಚಿಯಾದ ಅಡುಗೆ ಮಾಡುತ್ತಿರುತ್ತಾರೆ. ಆದರೆ ಅವರಂಗೆನೆ ಮತ್ತೊಬ್ಬರು ಮಾಡಿದರೆ ಆ ರುಚಿ ಸಿಗಲ್ಲ. ಅದಕ್ಕೇನೇ ಹೇಳುವುದು "ಕೈಗುಣ" ಅಂತ. ಆದರೆ ಕೆಲವರಿಗೆ ಮಾತ್ರ ಅದೃಷ್ಟದ ಕೈಗುಣದ ಅಡುಗೆ ಉಣ್ಣುವ ಭಾಗ್ಯವಿರುತ್ತದೆ. ಇದೇ ರೀತಿ ಮಿಥುನ ರಾಶಿಯವರ ಕೈಗುಣ ಈಗ ಸರಿಯಿಲ್ಲ ಎನ್ನಬಹುದು. ಏನೇ ಮಾಡಿದರೂ ಯಾರಿಗೂ ರುಚಿಸುವುದಿಲ್ಲ. ಏನಾದರೊಂದು ಹೆಸರಿಡುತ್ತಿರುತ್ತಾರೆ.

ಸಂಯಮ, ಸಹನೆಯಿಂದಿರಿ : ಕತ್ತಲೆಯಾದ ಮೇಲೆ ಬೆಳಕು ಬರುವ ಹಾಗೆ, ಇನ್ನೊಂದಿಷ್ಟು ಸಮಯ ಮಿಥುನ ರಾಶಿಯವರು ಸ್ವಲ್ಪ ಸಂಯಮ, ಸಹನೆಯಿಂದಿದ್ದರೆ ಸುಖದ ಸುಪ್ಪತ್ತಿಗೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾವುದಕ್ಕೂ ಜಾತಕದಲ್ಲಿ ಗ್ರಹಗಳ ಬಲಾಬಲವನ್ನೊಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ಆದರೆ, ಮಿಥುನ ರಾಶಿಯವರು ಸಾಮಾನ್ಯವಾಗಿ ಎರಡು ನಾಲಿಗೆಯವರ ತರಹ. ಇವರೊಂಥರಾ "ಹಂಗೂ ಸೈ, ಹಿಂಗೂ ಸೈ". ಇದಕ್ಕೇನೆ ಹೇಳುವುದು "ಹುಟ್ಟು ಗುಣ ಸುಟ್ಟರೂ ಹೋಗಲ್ಲ" ಎಂದು.

ಶನಿರಾಜನಂತೆ ಎಲ್ಲವನ್ನೂ ನೀಡುವವರು ಈ ಜಗದಲ್ಲಿ ಬೇರ‍್ಯಾರೂ ಇಲ್ಲ. ಅವನು ಕೊಡಲಾರಂಭಿಸಿದರೆ ಎರಡೂ ಕೈಗಳು ಮತ್ತು ಜೀವನ ಸಾಕಾಗಲ್ಲ ಕೊಟ್ಟದ್ದನ್ನು ತೆಗೆದುಕೊಳ್ಳಲು! ಅದೇ ರೀತಿ ಕೆಟ್ಟದ್ದನ್ನು ಮಾಡುವವನು ಕೂಡ ಈ ಮಹಾತ್ಮನೇ. ಅನ್ಯಾಯದ ಹಾದಿ ಹಿಡಿದಿದ್ದರೆ ಈಗಲ್ಲದಿದ್ದರೂ, ಮುಂದೆ ನೀಡುತ್ತಾನೆ ತಕ್ಕಶಾಸ್ತಿ ಬಿಡಲ್ಲ. ಯಾಕೆಂದರೆ ಶನಿದೇವನ ನ್ಯಾಯದ ತೇರಿನ ಗಾಲಿಗಳು ತುಂಬಾ ಭಾರ ಮತ್ತು ಬಲಿಷ್ಠ. ಸಾವಕಾಶವಾಗಿ, ನಿಧಾನಿಸುತ್ತ ಉರುಳುತ್ತ ಬರುತ್ತವೆ. ಅದರಡಿ ಸಿಕ್ಕವರು ಚಿಟ್ ಚಿಟ್ ಚೀರುತ್ತ ನುಜ್ಜ್ಗುಗುಜ್ಜಾಗುವುದು ತಪ್ಪೋದೇ ಇಲ್ಲ!

ಶನಿಶಕ್ತಿ ಅವಹೇಳನ ಬೇಡ : ಅಂದಂಗೆ, ಕೆಲವರಿಗೆ ಬಣ್ಣ ಬಣ್ಣದ ಮಾತುಗಳನ್ನು ಆಡುವವರೆಂದರೆ ತುಂಬಾ ಇಷ್ಟ. ಸುಳ್ಳೊಂದು, ಸೊಟ್ಟೊಂದು ಹೇಳಿ ಮನದಲ್ಲಿ ಬಯಕೆ ಮೂಡಿಸಿ ಮೋಸ ಮಾಡಿ ಹೋಗುವವರಿಗೆ ಕೆಲವರು ಮಣೆ ಹಾಕುತ್ತಾರೆ. ಸತ್ಯವು ಯಾವಾಗಲೂ ಕಹಿಯಾಗಿಯೇ ಇರುತ್ತದೆ. ಆದರೆ ಸತ್ಯ ಶಾಶ್ವತ. ಇದೇ ರೀತಿ ಶನಿದೇವನ ಪ್ರಭಾವವೂ ಕೂಡ ಸತ್ಯ ಮತ್ತು ಶಾಶ್ವತ. ಈ ದೇವನ ಬಗ್ಗೆ ಮಾತನಾಡುವವರೂ ಕೂಡ ಮೊದಲು ಸತ್ಯವಂತ, ನ್ಯಾಯವಂತರಾಗಿರಬೇಕಾಗುತ್ತದೆ. ಸುಖಾಸುಮ್ಮನೆ ಮಹಾತ್ಮನ ಶಕ್ತಿಯ ಅವಹೇಳನ ಮಾಡಿದವರು ಏನೇನೋ ಆಗಿ ಅನುಭವಿಸುತ್ತಿದ್ದಾರೆ.

ಯಾರಾದರೂ ಕಿರಿಕಿರಿ ಮಾಡುತ್ತ ತೊಂದರೆ ನೀಡಿ ವಿಕಟ ನಗೆ ನಗುತ್ತಿದ್ದಾರೆ ಅಂದುಕೊಳ್ಳಿ. ಅಂಥಹವರ ಮನೆಗೇನೆ ಎಂಟಾಣೆಯ ಪೋಸ್ಟ್ ಕಾರ್ಡ್‌ನಲ್ಲಿ ಅವರು ಮಾಡುತ್ತಿರುವ ದ್ರೋಹ, ಅನ್ಯಾಯ ಮತ್ತು ದುರ್ಗುಣಗಳ ಬಗ್ಗೆ ಬರೆದರೆ? ತಿದ್ದಿಕೊಳ್ಳಲು ಹೇಳಿ ನಿಮ್ಮ ಕುಟುಂಬದ ಸದಸ್ಯನ ದುರ್ಗುಣ. ಇಲ್ಲವಾದರೆ, ಶನಿಮಹಾತ್ಮನು ಪಾಪದ ಕರ್ಮಫಲ ನೀಡುವಾಗ ನಿಮ್ಮನ್ನೂ ಬಿಡಲ್ಲ ಎಂದು ಎಚ್ಚರಿಸುವ "ಹೆಸರಿಲ್ಲದವರ ಮೂಕರ್ಜಿ" ತರಹ ಪತ್ರ ಹಾಕಿದರೆ ಹೇಗಿರುತ್ತೇ? ಒಮ್ಮೆ ಯೋಚಿಸಿ ದ್ರೋಹ, ವಂಚನೆ, ಸುಳ್ಳು ಹೇಳುವ ಮೊದಲು.

ಇನ್ನು ಕೆಲವರು ನನಗೆ ತುಂಬಾ ತೊಂದರೆಗಳು ಎಂದು ಎಲ್ಲರಲ್ಲೂ ಹೇಳುತ್ತ ತಿರುಗುತ್ತಿರುತ್ತಾರೆ. ಆದರೆ ಇವರ ಕರ್ಮ ಹೇಗಿರುತ್ತೆ ಎಂದರೆ. ಇವರು ಒದರುತ್ತ, ತಿರುಗುತ್ತಲೇ ಇರುತ್ತಾರೆ ಹೊರತು ಇವರ ತೊಂದರೆಗಳು ಪರಿಹಾರವಾಗುತ್ತಿರುವುದಿಲ್ಲ. ಏಕೆಂದರೆ ಇವರೆಂಥವರು ಇರುತ್ತಾರೆ ಎಂದರೆ, ಪರಿಹಾರಗಳೇ ಇವರನ್ನು ಹುಡುಕಿಕೊಂಡು ಬರಬೇಕು! ಇಂಥವರು ನಮ್ಮೆಲ್ಲರ ನಡುವೆಯೇ ಕಾಣಸಿಗುತ್ತಾರೆ. ಇಂಥಹವರಿಗೆಂದೇ "ಯಾರೋ ಒದರಿದರೆ ದೇವಲೋಕ ಹಾಳಾಗಲ್ಲ" ಎಂಬ ಮಾತು ಹುಟ್ಟಿಕೊಂಡಿರಬೇಕು.

"ಶನಿಶಕ್ತಿ ; ಕರ್ಕ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಹಬ್ಬದ ಸಂದರ್ಭದಲ್ಲಿ ಮನೆ ಮುಂಬಾಗಿಲು ಮತ್ತು ಒಳಬಾಗಿಲುಗಳಿಗೆ ಮಾವಿನ ಹಸಿ ಎಲೆಗಳ ತೋರಣ ಕಟ್ಟಬೇಕು. ಪ್ಲಾಸ್ಟಿಕ್ ತೋರಣ ಬೇಡ.

ಶನಿದೇವನ ಕೃಪೆಗೆ : ಅಷ್ಟಮದಗಳೆನ್ನಿಸಿಕೊಂಡಿರುವ ಅನ್ನ, ಹಣ, ಯೌವನದ ಬಲ, ಸ್ತ್ರೀ, ವಿದ್ಯೆ, ಕುಲ, ರೂಪ, ಉದ್ಯೋಗದ ಮದಗಳನ್ನು ಬಿಟ್ಟು ಬಿಡಬೇಕು. ಯಾವುದೂ ಶಾಶ್ವತವಲ್ಲ. ಎಲ್ಲವೂ ಬಿಟ್ಟು ಹೋಗುವವೇ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 32 : Impact of Sade Sati on zodiac signs. Lord Shani is now panchama for Gimini. It is advisable for Gemini people not to take any rist in business or get into unnecessary altercation with anyone. Next week : How Shani comes to the rescue of Cancer zodiac sign people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X