ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಕ ರಾಶಿಗೆ ಅರ್ಧಾಷ್ಟಮನಾಗಿ ಕಾಡಲಿದ್ದಾನೆ ಶನಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಆಶ್ಲೇಷ, ಪುಷ್ಯ, ಪುನರ್ವಸು ನಕ್ಷತ್ರದ 4ನೇ ಪಾದದಲ್ಲಿ ಜನಿಸಿದವರು ಕರ್ಕ ರಾಶಿಯವರು. ಎಲ್ಲ ರೀತಿ ಸಕಲೈಶ್ವರ್ಯ ಈ ಹಿಂದೆ 3ನೇ ಸ್ಥಾನದಲ್ಲಿದ್ದಾಗ ಶನಿದೇವನು ನೀಡಿದ್ದಾನೆ (ಸಿಂಹ ರಾಶಿಯವರಿಗೆ ಈಗ ಮಹಾತ್ಮನು 3ನೇ ಸ್ಥಾನದಲ್ಲಿದ್ದಾನೆ). ಈಗ 4ನೇ ಸ್ಥಾನದಲ್ಲಿ ಅರ್ಧಾಷ್ಟಮನಾಗಿದ್ದಾನೆ. ಮುಂದಿನ ದಿನಗಳಲ್ಲಿ ಪಂಚಮಶನಿಯಾಗಿ (ಮಿಥುನ ರಾಶಿಗೆ ಈಗ ಪಂಚಮಶನಿ ಕಾಟ ಇದೆ) ತೊಂದರೆ ನೀಡಲಿದ್ದಾನೆ. ಆದ್ದರಿಂದ ಪಂಚಮಶನಿ ಸಂಪನ್ನಕ್ಕೆ ಈಗಿನಿಂದಲೇ ಮುಂದಾಗುವುದು ಒಳ್ಳೆಯದು.

ಅಷ್ಟಮಶನಿಯ (ಮೀನ ರಾಶಿಯವರಿಗೆ ಈಗ ಅಷ್ಟಮಶನಿ ಕಾಟ ಇದೆ) ಸಂಕಷ್ಟಗಳನ್ನೇ ಅರ್ಧಾಷ್ಟಮದಲ್ಲಿದ್ದಾಗ ಮಹಾತ್ಮನು ಇವರಿಗೆ ನೀಡುತ್ತಾನೆ. ದುಡ್ಡಿನ ಕಿರಿಕಿರಿ ಈ ಸಮಯದಲ್ಲಿ ಹೆಚ್ಚಾಗುತ್ತದೆ. ಸಾಲ ತೆಗೆದುಕೊಂಡಿದ್ದರೆ ಅದನ್ನು ತೀರಿಸಲು ಹೆಣಗಾಡುವಂತಾಗಿ ಜೀವನವೇ ಬೇಸರವೆನಿಸುತ್ತದೆ. ಆದಾಯ ಒಂದಂಶವಾದರೆ ಖರ್ಚು ಹತ್ತಂಶವಾಗಿರುತ್ತದೆ. ಸಾಲ ಕೊಟ್ಟವರು ಪಿಟಿಪಿಟಿ ಹಚ್ಚುತ್ತಾರೆ. ಸಾಲಗಾರರ ಕಿರಿಕಿರಿಗೆ ಮನಸ್ಸಂತೋಷ ಮರೀಚಿಕೆಯಾಗುತ್ತದೆ.

ಕೆಲಸದಲ್ಲೂ ಅಷ್ಟೇ, ಮೈಬಗ್ಗಿಸಿ, ಮೈತುಂಬ ಕೆಲಸ ಮಾಡಿದ್ದರೂ ಫಲ ಬೇರೆಯವರು ಪಡೆದುಕೊಳ್ಳುತ್ತಾರೆ. ದುಡಿಮೆಯಲ್ಲಿ ಸದ್ಯ ಎರಡು ವರ್ಗದ ಜನರಿದ್ದಾರೆ. ಒಂದು ದುಡಿಯುವ ವರ್ಗ. ಇನ್ನೊಂದು ದುಡಿಸಿಕೊಳ್ಳುವ ವರ್ಗ. ಹೀಗಾಗಿ ಒಂದನೇ ವರ್ಗದಲ್ಲಿ ಬರುವ ಕರ್ಕ ರಾಶಿಯವರು ತಾವು ಕಷ್ಟಪಟ್ಟು ಬೆವರು ಸುರಿಸಿ ದುಡಿದು, ದುಡಿಸಿಕೊಳ್ಳುವ ವರ್ಗದವರನ್ನು ಶ್ರೀಮಂತರನ್ನಾಗಿ ಮಾಡುತ್ತಾರೆ!

Sade Sati : Shani effect on Cancer zodiac sign

ಮನೆಯಲ್ಲಿನವರು ಇವರಿಗೆ ಏನೇನೋ ಇಲ್ಲಸಲ್ಲದ್ದನ್ನು ಹೇಳಿ ತಲೆ ಕೆಡಿಸಿ ಬಿಡುತ್ತಿರುತ್ತಾರೆ. ಇನ್ನು ಹೃದಯಕ್ಕೆ ಹತ್ತಿರದವರೊಂದಿಗೆ ಸುಮ್ಮನೇ ಜಗಳ ಮಾಡಿಕೊಂಡು ಹೃದಯವೇದನೆ ಅನಭವಿಸುವಂತಾಗುತ್ತದೆ. ದೇಹದಲ್ಲಿ ಉತ್ಸಾಹ, ಹುಮ್ಮಸ್ಸು ಇಲ್ಲದೆ ರೋಗ ಕಾಣಿಸಿಕೊಳ್ಳುತ್ತಿರುತ್ತವೆ. ಒಂದು ತಪ್ಪಿದರೆ ಮತ್ತೊಂದು ರೆಡಿಯಾಗಿಯೇ ಇರುತ್ತದೆ. ಅತೀ ವಿಶ್ವಾಸದಿಂದ ನೀಡಿದ ಮಾತಿನಂತೆ ನಡೆದುಕೊಳ್ಳದೆ ಅವಮಾನ ಅನುಭವಿಸಬೇಕಾಗುತ್ತದೆ.

ಆಸೆ ಇರಬೇಕು, ಆದರೆ ದುರಾಸೆ ಇರಬಾರದು ಎಂಬಂತೆ. ಇದ್ದುದರಲ್ಲಿಯೇ ಸಂತೃಪ್ತವಾಗಿರಲು ಕಲಿಯಬೇಕು ಕರ್ಕ ರಾಶಿಯವರು. ಇಲ್ಲವಾದರೆ ಯಾವಾಗಲೂ ಮುಂದೇನಾಗುತ್ತದೋ ಎಂದು ವಿಚಿತ್ರ ಭಯದಿಂದ ದಿನ ದೂಡಬೇಕಾಗುತ್ತದೆ.

ಹಳೆಯದನ್ನು ಈ ಸಮಯದಲ್ಲಿ ಯೋಚಿಸುತ್ತ ಇರುವುದು ಹುಚ್ಚತನವಾಗುತ್ತದೆ. ಪ್ರೀತಿಯಿಂದ ಕೊಂಡ ವಸ್ತುಗಳನ್ನು ಸಾಲ ತೀರಿಸಲು ಕೊಡಬೇಕಾಗಬಹುದು. ಆದಷ್ಟು ಖರ್ಚಿನ ಹವ್ಯಾಸ ಬಿಟ್ಟು ಬಿಡಬೇಕು. ತಾಳ್ಮೆ, ಸಹನೆ, ಸಮಾಧಾನ ಅಳವಡಿಸಿಕೊಳ್ಳದಿದ್ದರೆ ಯಾರೂ ಸಹಕಾರ ನೀಡಲ್ಲ. ಇನ್ನು ದುಷ್ಟ ಗುಣಗಳವರ ಸ್ನೇಹ, ಪ್ರೀತಿ ಮಾಡಿದವರು ತಮ್ಮ ಬಾವಿ ತಾವೇ ತೋಡಿಕೊಂಡಂತೆ. ಇವರನ್ನು ಹಾಳು ಮಾಡದೇ ಬಿಡಲ್ಲ ಅವರು. ಈ ವಿಷಯದಲ್ಲಿ ಜಾಗೃತೆ ವಹಿಸಿಕೊಳ್ಳಬೇಕು ಕರ್ಕ ರಾಶಿಯವರು.

ಹಳೆಯ ಸ್ನೇಹ, ಪ್ರೀತಿ ಕಳೆದುಕೊಂಡರೆ ಜೀವನಪೂರ್ತಿ ಮರಳಿ ಬರಲ್ಲ. ಆದ್ದರಿಂದ ಎಲ್ಲರನ್ನೂ ಉಳಿಸಿಕೊಳ್ಳಬೇಕು. ತಮ್ಮ ಭವಿಷ್ಯದ ಜೀವನ ಚೆನ್ನಾಗಿರಬೇಕೆಂದರೆ ಮಾತು ಕೂಡ ಹಿಡಿತದಲ್ಲಿಟ್ಟುಕೊಂಡಿರಬೇಕು. ಬಾಯಿಗೆ ಬಂದದ್ದನ್ನೇ ಮಾತನಾಡಿದರೆ ಬುದ್ಧಿಹೀನರೆನಿಸಿಕೊಳ್ಳುತ್ತಾರೆ. ಕೆಲಸದಲ್ಲಿ ಎಲ್ಲವನ್ನೂ ನಾನೇ ಮಾಡುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಳ್ಳಬಾರದು. ತಮಗೊಪ್ಪಿಸಿದ ಕೆಲಸ ಮಾತ್ರ ಅಚ್ಚುಕಟ್ಟಾಗಿ ಮಾಡಿದರೆ ಸಾಕು. ಇವರು ಅಪ್ಪಿತಪ್ಪಿಯೂ ಕಪ್ಪಗಿನ ವಸ್ತು ಬಳಸಬಾರದು.

ಆದರೆ ಇವರಿಗೊಂದು ವಿಚಿತ್ರ ಗುಣವಿರುತ್ತದೆ. ಅದೆಂದರೆ ಕಾಂಪ್ರೋಮೈಸ್ ಆಗೋದು. ಈ ರೀತಿ ಗುಣ ಬಿಟ್ಟುಬಿಡಬೇಕು. ಭಾಗ್ಯದಲ್ಲಿದ್ದರೆ ಎಲ್ಲವೂ ಬರುತ್ತದೆ. ಇಲ್ಲವಾದರೆ ಏನೂ ಇಲ್ಲ ಎಂದುಕೊಂಡಿರುವುದು ನ್ಯಾಯವಾದ ಜೀವನ. ಅನ್ಯಾಯದ ಜೀವನ ಬೇಕಿದ್ದರೆ ಕಾಂಪ್ರೋಮೈಸ್ ಆಗಿ. ಆಮೇಲೆ ಇದ್ದೇ ಇದೆ ಅನುಭವಿಸುವುದು ಕಣ್ಣೀರಿನೊಂದಿಗೆ. ಯಾಕೆಂದರೆ, ಯಾವಾಗಲೂ ನಮಗಿಂತಲೂ ಸಣ್ಣವರ ಜೀವನ ನೋಡಿಕೊಂಡು ನಾವು ಬಾಳುವುದನ್ನು ಕಲಿಯಬೇಕಂತೆ. ಅವರು ಅಷ್ಟು ಶ್ರೀಮಂತರು, ಅವರಲ್ಲಿ ಅದಿದೆ, ಇದಿದೆ ಎಂದುಕೊಂಡು ಮರುಗುತ್ತ ರಕ್ತ ಸುಟ್ಟುಕೊಳ್ಳುತ್ತಿದ್ದರೆ ನಷ್ಟ ಆಗೋದು ಯಾರಿಗೆ?

ದೊಡ್ಡವರು, ಸಣ್ಣವರು ಎಂದರೇನು ಎಂಬ ಸಹಜವಾದ ಪ್ರಶ್ನೆ ಮನದಲ್ಲಿ ಮೂಡುತ್ತದೆ ಕೆಲ ಸಣ್ಣ ಬುದ್ಧಿಯವರಿಗೆ. ದೊಡ್ಡವರೆಂದರೆ ದುಡ್ಡಿರೋರು, ಅಧಿಕಾರ, ಪದವಿ, ಆಸ್ತಿ, ಅಂತಸ್ತು, ಉಚ್ಚ ಜಾತಿಯವರು ಎಂದರ್ಥ. ಸಣ್ಣವರು ಎಂದರೆ ಕಮ್ಮಿ ಜಾತಿ ಎನಿಸಿಕೊಂಡವರು, ಬಡವರು, ಕಷ್ಟಪಟ್ಟು ದುಡಿಮೆ ಮಾಡಿ ಜೀವನ ಸಾಗಿಸುವವರು. ಆದರೆ, ಎಷ್ಟೇ ದೊಡ್ಡವರಿದ್ದರೆ ಏನು ಫಲ? ಮಾನವೀಯತೆ ಇಲ್ಲದೆ ಹೋದರೆ? ಮಹಾತ್ಮನ ಆಟ ಶುರುವಾದಾಗ ಮಾನವೀಯತೆ ಮರೆತವರಿಗೆ ಗೊತ್ತಾಗುತ್ತದೆ ನಮ್ಮ ಕಷ್ಟಗಳಿಗೂ ಯಾರೂ ಸ್ಪಂದಿಸುತ್ತಿಲ್ಲವಲ್ಲ ಎಂದು.

ಅಷ್ಟೇ ಅಲ್ಲದೇ ದೊಡ್ಡವರೆನಿಸಿಕೊಂಡವರು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿರುವುದರಿಂದ, ಇವರು ಹೊಗಳುಭಟ್‌ರೆಂದು ಎಲ್ಲರಿಗೂ ಗೊತ್ತಿರುತ್ತದೆ. ಇವರೇ ಬೆಳೆಸಿದ ಪಟಾಲಂಗೂ ಗೊತ್ತಿರುತ್ತದೆ ತಮ್ಮ ನಾಯಕ ಹೊಗಳುಭಟ್‌ರು ಎಂದು. ಇವರನ್ನು ಯಾಮಾರಿಸುವುದೆಂಗೆ ಎಂಬುದು ಅವರಿಗೆ ಕರಗತವಾಗಿರುತ್ತದೆ. ಹೀಗಾಗಿಯೇ ತಮ್ಮ ನಾಯಕನ ಹೆಸರು ಹೇಳಿಕೊಂಡು ಎಷ್ಟೋ ಜನರು ಅನ್ಯಾಯ, ಅಕ್ರಮ ಮಾಡುತ್ತಿರುತ್ತಾರೆ. ಆದರೆ, "ಶನಿದೇವನಿಂದ ಕರ್ಮಫಲ" ಎಲ್ಲರೂ ಹಂಚಿಕೊಳ್ಳುತ್ತಾರೆ ಆಮೇಲೆ ಎಂಬುದು ಮಾತ್ರ ಸತ್ಯ. ಬೇಕಾದಂತಹ ದೊಡ್ಡವರಿರಲಿ, ಮಾನವೀಯತೆ ಇಲ್ಲದ ಅವರನ್ನು ಮಣ್ಣುಮುಕ್ಕಿಸುವುದು ಏನು ದೊಡ್ಡ ವಿಷಯವಲ್ಲ. ಆದರೆ ಸಣ್ಣವರಲ್ಲಿ ಮಾನವೀಯತೆ ಇರೋದ್ರಿಂದ ಯಾರೂ ಆ ತರಹ ಮಾಡಲ್ಲ.

ವರ್ಷದಲ್ಲಿ ಒಂದಿಡಿ ದಿನ ಸಮುದ್ರದ ನೀರಿನಲ್ಲಿ ಕಳೆದರೆ ಹೇಗೆ ಯಾವುದೇ ಚರ್ಮರೋಗ ಬರುವುದಿಲ್ಲವೋ ಅದೇ ರೀತಿ, ದಿನದಲ್ಲಿ ಒಂದು ಹೊತ್ತು ದೇವರ ಸ್ಮರಣೆ ಮಾಡುತ್ತಿದ್ದರೆ ಯಾವುದೇ ಭಯಂಕರ ಕಷ್ಟಗಳು ಬರುವುದಿಲ್ಲ.

"ಶನಿಶಕ್ತಿ ; ಸಿಂಹ ರಾಶಿಗೆ ಹೀಗಿದೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಸಾಮರ್ಥ್ಯವಿದ್ದರೆ ಮನೆಯಲ್ಲಿ ಎರಡು ಬೆಳ್ಳಿದೀಪದಲ್ಲಿ ತುಪ್ಪದ ಬತ್ತಿ ಹಚ್ಚಬೇಕು.

ಶನಿದೇವನ ಕೃಪೆಗೆ : ಜಗಳಗಂಟತನ, ಮತ್ತೊಬ್ಬರಲ್ಲಿ ತಪ್ಪು ಹುಡುಕುವುದನ್ನು, ಹರಿದ ಬಟ್ಟೆ ಧರಿಸುವುದನ್ನು ಬಿಡಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 33 : Impact of Sade Sati on zodiac signs. Lord Shani leaves no one on the earth. Now it is testing time for Cancer zodiac sign people. Nothing works out for them during thie period. So, be patient and worship Shani, Shiva or Hanuman. Next week : How Shani troubles Leo zodiac sign people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X