ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯಾ ತುಲಾ ವೃಶ್ಚಿಕ ಮಕರ ರಾಶಿಯವರು ಹೀಗಿರ್ತಾರೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

Sade Sati in Virgo, Libra, Scorpio and Capricorn
ಸಾಡೇಸಾತಿಯನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ ಕನ್ಯಾ, ತುಲಾ ಮತ್ತು ವೃಶ್ಚಿಕ ರಾಶಿಯವರು. ಸಾಡೇಸಾತಿ ಬಗ್ಗೆ ಅಪನಂಬಿಕೆ ಅಥವಾ ಶನಿದೇವರ ಪ್ರಭಾವದ ಮೇಲೆ ಸಂಶಯವಿರುವವರು ಸಾಡೇಸಾತಿಯಲ್ಲಿರುವ ರಾಶಿಗಳವರನ್ನು ಮಾತನಾಡಿಸಿ ಗೊತ್ತಾಗುತ್ತೆ. ಅವರ ತಾಪತ್ರಯ ಕೇಳಿ ಸುಮ್ಮನಾಗದೇ ನಿಮ್ಮ ಕೈಲಾದ ಸಹಾಯ ಮಾಡಿ ಅವರಿಗೆ. ಶನಿಕಾಟ ನಿಮಗೂ ಮುಂದೊಂದು ದಿನ ಕಾದಿದೆ ಎಂಬುದು ಗೊತ್ತಿರಲಿ.

ಇಲ್ಲಿ ರಾಶಿಗಳವರ ಕೆಲವೇ ಕೆಲವು ಉತ್ತಮ ಗುಣ ತಿಳಿಸಲಾಗಿದೆ. ಆದರೂ ಕೆಲವೊಂದು ರಾಶಿಗತವಾದ ಕೆಟ್ಟ ಗುಣಗಳೂ ಇರುತ್ತವೆ. ಕೆಟ್ಟ ಗುಣಗಳವರ ಸಹವಾಸದಿಂದ ಕೆಲವೊಮ್ಮೆ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡುವಂತೆ ಮನಸ್ಸು ಪ್ರೋತ್ಸಾಹಿಸುತ್ತದೆ. ಅಲ್ಲದೇ ಶನಿದೇವನೂ ಕೂಡ ಕೆಟ್ಟ ಕೆಲಸ ಮಾಡಲು ಉತ್ತೇಜಿಸುತ್ತಾನೆ. ಅದಕ್ಕೆ ಸಾಡೇಸಾತಿ ಈ ಹಿಂದಿನ ಸರಣಿಯಿಂದಲೂ ಮತ್ತೊಬ್ಬರಿಗೆ ಕೆಟ್ಟದ್ದನ್ನು ಮಾಡಬೇಡಿ ಎಂದು ಹೇಳುತ್ತಿರುವುದು.

ಕನ್ಯಾ : ರಾಶಿಯಿಂದ 2ನೇ ಸ್ಥಾನದಲ್ಲಿರುವ ಶನಿರಾಜನ ಏಳರಾಟದ 2 ಹಂತ ಮುಗಿಸಿ ಇನ್ನೂ ಪರೀಕ್ಷಾ ಕಾಲದಲ್ಲಿಯೇ ಇರುವ ಇವರು ತುಂಬಾ ಸಹನೆ, ತಾಳ್ಮೆ ಮತ್ತು ಶಾಂತ ಸ್ವಭಾವದವರಾಗಿರುತ್ತಾರೆ. ವೇಗದ ನಡಿಗೆಯೆಂದರೆ ಅಲಸ್ಯತನ. ಎಲ್ಲ ಕೆಲಸ ಶೀಘ್ರವಾಗಿ ಮುಗಿಸುವ ಮನೋಧೈರ್ಯವಿರುತ್ತದೆ. ಶ್ರೀಮಂತರಂತೆ ತಮ್ಮ ಜೀವನಶೈಲಿ ಇರಬೇಕು ಎಂದುಕೊಳ್ಳುವವರು. ಇತರರು ಇವರಿಂದ ಗೌರವ, ಮರ್ಯಾದೆ ಪಡೆಯುತ್ತಾರೆ. ಹಣ ಎಣಿಸಿ, ಎಣಿಸಿ ಬಳಸುತ್ತಾರೆ. ಒಂದಿಲ್ಲೊಂದು ವಿಶಿಷ್ಟ ಕಲೆಯಲ್ಲಿ ತಮ್ಮ ಮನಸ್ಸನ್ನು ತೊಡಗಿಸಿಕೊಂಡಿರುತ್ತಾರೆ.

ಪರಿಚಿತರಿಗೆ ಸಹಾಯ ಮಾಡುತ್ತ, ಮನೆಯವರೊಂದಿಗೆ ಹಾಗೂ ವಯಸ್ಸಾದವರೊಂದಿಗೆ ಅತೀವ ಸಲುಗೆ ಮತ್ತು ಸ್ನೇಹ ಇಟ್ಟುಕೊಂಡಿರುತ್ತಾರೆ. ದೇವರೆಂದರೆ ಇವರಿಗಿಷ್ಟ. ಹೀಗಾಗಿ ಬಹಳಷ್ಟು ಸಮಯ ದೈವಭಕ್ತಿಗಾಗಿ ಮೀಸಲಿಡುತ್ತಾರೆ. ಕೆಲವೊಮ್ಮೆ ತಮ್ಮ ಅಜ್ಞಾನದಿಂದ ಮಾಡಿದ ತಪ್ಪಿನಿಂದ ಕಷ್ಟ ಅನುಭವಿಸುತ್ತ, ಪಶ್ಚಾತ್ತಾಪ ಪಡುತ್ತ ನೊಂದುಕೊಳ್ಳುತ್ತಾರೆ. ಏನಾದರೂ ಸಮಸ್ಯೆ ಅಥವಾ ತೊಂದರೆ ಇದ್ದರೆ ಅದನ್ನು ಬಗೆಹರಿಸಲು ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಮಾಡದೇ ಅದರಿಂದ ಪಾರಾಗಲು ಯಾವುದಾದರೂ ದಾರಿ ಹುಡುಕಿರುತ್ತಾರೆ. ಶಿಸ್ತಿನಿಂದ ಜೀವನಶೈಲಿ ನಡೆಸಿಕೊಂಡು, ಮನಸು ಬಯಸಿದರೆ ಊರೂರು ಸುತ್ತೋದು ಇವರಿಗಿಷ್ಟ. ಅತೀ ಕಡಿಮೆ ಹಣದಿಂದ ಹೆಚ್ಚು ದುಡ್ಡು ಮಾಡುವ ಬೆರಕಿ ಸ್ವಭಾವ ಇವರದು.

ತುಲಾ : ಜನ್ಮರಾಶಿಯಲ್ಲಿ ಶನಿರಾಜನು ಏಳರಾಟದ ಒಂದನೇ ಹಂತ ಮುಗಿಸಿ 2ನೇ ಹಂತದಲ್ಲಿದ್ದಾನೆ. ಸಾಮಾನ್ಯವಾಗಿ ಈ ರಾಶಿಯವರು ಗಂಡಾಗಲಿ, ಹೆಣ್ಣಾಗಲಿ ಸ್ವಲ್ಪ ಸುಂದರವಾಗಿಯೇ ಇರುತ್ತಾರೆ. ಸದೃಢ ಮೈಕಟ್ಟು ಇವರದು. ಇವರನ್ನು ನೋಡುತ್ತಲಿದ್ದರೆ ನೋಡುತ್ತಲೇ ಇರಬೇಕು ಎನಿಸುವಷ್ಟು ಸುಂದರ ಮುಖಭಾವ ಇವರದು. ಇವರನ್ನು ಯಾರೇ ನೋಡಲಿ ಪ್ರೀತಿಯಿಂದಲೇ ಕಾಣುತ್ತಾರೆ. ಇವರಲ್ಲಿ ಎಷ್ಟೇ ವಿದ್ಯೆ, ಹಣ, ತೋಳ್ಬಲವಿದ್ದರೂ ಒಂದನ್ನೂ ದುರುಪಯೋಗ ಮಾಡಿಕೊಳ್ಳದೇ, ಸೊಕ್ಕಿನಿಂದಿರದೇ ಎಲ್ಲರೊಂದಿಗೆ ಸೂಕ್ಷ್ಮವಾಗಿಯೇ ನಡೆದುಕೊಳ್ಳುತ್ತಾರೆ. ದುಡುಕಿನ ಗುಣಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೇ ಕ್ರಮೇಣವಾಗಿ ಜೀವನದ ಮೆಟ್ಟಿಲೇರುತ್ತಾರೆ.

ಎಲ್ಲ ಕೆಲಸ ಬುದ್ಧಿವಂತಿಕೆ ಮಾಡಿ ತೋರಿಸಿ ಇದೇ ತರಹ ಕೆಲಸ ಮಾಡಬೇಕು ಎಂದು ಇತರರನ್ನು ಹುರಿದುಂಬಿಸುತ್ತಾರೆ. ಪ್ರತಿದಿನ ಏನಾದರೊಂದು ಹೊಸ ವಿಚಾರ ತಿಳಿದುಕೊಳ್ಳುವ ಗುಣ ಇವರದು. ಸತ್ಯ, ನ್ಯಾಯ, ನೀತಿ, ಧರ್ಮದಿಂದ ಬಾಳುತ್ತ ಕಷ್ಟದಲ್ಲಿರುವವರನ್ನು ಕಂಡರೆ ಕೂಡಲೇ ತಮ್ಮಿಂದಾಗುವಷ್ಟು ಸಹಾಯ ಮಾಡುತ್ತಾರೆ. ಯಾವುದಾದರೊಂದು ಕಲೆಯು ಇವರಿಗೆ ಸಿದ್ಧಿಯಾಗಿಯೇ ಇರುತ್ತದೆ. ಇಷ್ಟಪಟ್ಟಂತೆ ಜೀವಿಸುವ ಗಟ್ಟಿಮನಸ್ಸು ಇವರದು. ದೇವರ ಬಗ್ಗೆ ನಂಬಿಕೆ ಸಾಕಷ್ಟಿದ್ದರೂ ಅನುಕೂಲಕ್ಕೆ ತಕ್ಕಂತೆ ಬದಲಾಗುವ ಊಸರವಳ್ಳಿ ಸ್ವಭಾವ ಇವರದು. ಕೆಲವೊಮ್ಮೆ ಇವರಾಡುವ ಮಾತಿನಿಂದಲೇ ಎಷ್ಟೋ ಜನರು ಇವರಿಂದ ದೂರ ಸರಿಯುತ್ತಾರೆ. ಅಷ್ಟೊಂದು ಮನಸಿಗೆ ನಾಟುವ ಹಾಗೆ ಮಾತನಾಡುತ್ತಾರೆ.

ವೃಶ್ಚಿಕ : ಜನ್ಮರಾಶಿಯಿಂದ 12ನೇ ಸ್ಥಾನದಲ್ಲಿ ಶನಿರಾಜನು ಇವರಿಗೆ ಏಳರಾಟದ 1ನೇ ಹಂತದಲ್ಲಿ ಕಾಲಿಟ್ಟಿದ್ದಾನೆ. ನೋಡಲು ಸ್ವಲ್ಪ ಒರಟರಂತೆ ಕಾಣುವ ಇವರು, ತಮಗೆ ಬೇಕಾದ್ದನ್ನು ತಮ್ಮ ಮನಸ್ಸಿಗೆ ಹಿಡಿಸಿದ್ದನ್ನೇ ಮಾಡುತ್ತಾರೆ. ಛಲ, ಧೈರ್ಯದಿಂದಿದ್ದು, ಹಲವಾರು ರಹಸ್ಯಗಳು ತಮ್ಮಲ್ಲಿದ್ದರೂ ಯಾವುದನ್ನೂ ತೋರಗೊಡುವುದಿಲ್ಲ. ಎಲ್ಲರೊಂದಿಗೆ ಅತೀ ಸುಲಭವಾಗಿ ಸ್ನೇಹ ಗಳಿಸಿಕೊಳ್ಳುತ್ತಾರೆ. ಉಚ್ಚರು-ನೀಚರು ಎಂಬುದನ್ನು ಸಹ ಯೋಚಿಸದೇ ಎಲ್ಲರೂ ಬೇಕಿವರಿಗೆ. ಇವರೊಂಥರಾ ಕನ್ನಡಿಯಿದ್ದಂಗೆ ಹೇಗೆ ಬರುತ್ತೋ ಹಾಗಿರುತ್ತಾರೆ. ಯಾರಾದರೂ ಇವರನ್ನು ಹೊಗಳಿದರೆ ಇವರೂ ಹೊಗಳುತ್ತಾರೆ. ಇವರನ್ನು ತೆಗಳಿದರೆ ಅವರನ್ನು ಹಿಗ್ಗಾಮುಗ್ಗಾ ಬೈಯುತ್ತಾರೆ. ಒಳ್ಳೆಯದಕ್ಕೆ ಒಳ್ಳೆಯವರು, ಕೆಟ್ಟದ್ದಕ್ಕೆ ಅತೀ ಕೆಟ್ಟವರಿವರು.

ಬುದ್ಧಿವಂತರು, ಸಮಾಜದಲ್ಲಿನ ಗಣ್ಯ ವ್ಯಕ್ತಿಗಳು ಅಥವಾ ಇವರಿಗಿಂತ ಅಂತಸ್ತಿನಲ್ಲಿ ದೊಡ್ಡವರು ಇವರಿಗೆ ಸ್ನೇಹಿತರು. ತಮಗೇನಾದರೂ ಹೆಚ್ಚು ಕಮ್ಮಿ ಆದರೆ ಎಲ್ಲಿಯ ನ್ಯಾಯ, ನೀತಿ, ಧರ್ಮ ಎಂದು ಗುರುಗುಡುತ್ತಾರೆ. ಬಹಳಷ್ಟು ಗೆಳೆತನದ ಕೊಂಡಿಗಳನ್ನು ಹೊಂದಿರುವ ಇವರು ಗೆಳೆಯರಿಂದಲೇ ಲಾಭ ಮಾಡಿಕೊಳ್ಳುತ್ತಾರೆ. ನಾಳೆ ಹೀಗೆಯೇ ಮಾಡಬೇಕು ಎಂಬ ಪ್ಲಾನ್ ಇವರ ಮನದಲ್ಲಿ ರೆಡಿಯಾಗಿಯೇ ಇರುತ್ತದೆ. ಆದರೆ ಇವರೆಲ್ಲರಿಗೂ ಸಹಾಯ ಮಾಡಿದರೂ ಯಾರೂ ಇವರ ಸಹಾಯವನ್ನು ನೆನೆಸುವುದಿಲ್ಲ. ಸ್ವಲ್ಪ ಬಿಜಿನೆಸ್ ಮೈಂಡ್ ಇದ್ದರೂ ಕುಟುಂಬದ ಸದಸ್ಯರು ಚೆನ್ನಾಗಿ ಇರಬೇಕೆಂದು ಬಯಸುವರು. ಕ್ರಮೇಣ ಯಶಸ್ಸಿನ ಮೆಟ್ಟಿಲು ಹತ್ತುವ ಸ್ವಭಾವ. ಎಲ್ಲವನ್ನೂ ತಾವೊಬ್ಬರೇ ಗಳಿಸುತ್ತ ಆಸ್ತಿ ಮಾಡುವ ಸೌಭಾಗ್ಯವಿರುತ್ತದೆ.

ಮಕರ : ಶನಿರಾಜನು ಇವರಿಗೆ ಕರ್ಮಸ್ಥಾನವಾದ ದಶಮದಲ್ಲಿದ್ದಾನೆ ಈಗ. ಇವರು ಹೆಚ್ಚು ಹಠವಂತರು, ತಮ್ಮದೇ ಮಾತು ನಡೆಯಬೇಕು ಎನ್ನುತ್ತ ಅಧಿಕಾರಯುತವಾಗಿರುವರು. ಎಲ್ಲರಿಗೂ ಚೆನ್ನಾಗಿ ಕಾಣಿಸಬೇಕು ಎಂದು ಬಯಸುತ್ತ, ಮಾತಿನಲ್ಲಿ ಚತರರು. ಅಂದುಕೊಂಡ ಕೆಲಸವನ್ನು ಎಲ್ಲರಿಗಿಂತಲೂ ಬೇಗನೆ ಮುಗಿಸುತ್ತಾರೆ. ಏನೇ ಮಾಡಿದರೂ ಅದರ ಬಗ್ಗೆ ಮೊದಲೇ ಹತ್ತು ಬಾರಿ ಯೋಚಿಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗೆ ಸೇವೆ ಮಾಡುವುದು ಇವರಿಗಿಷ್ಟ. ತಮ್ಮ ಪ್ರತಿಷ್ಠೆ ಇವರಿಗೆ ಎಲ್ಲರಿಗಿಂತ ಹೆಚ್ಚು. ಹೀಗಾಗಿ ಯಾವುದಕ್ಕೂ ಹೆದರುವುದಿಲ್ಲ.

ಏನಾದರು ಮಾಡಬೇಕೆಂದು ಅಂದುಕೊಂಡರೆ ಆ ಕೆಲಸವನ್ನು ಮಾಡದೇ ಬಿಡಲ್ಲ. ಹೆಂಡತಿ ಮಕ್ಕಳೆಂದರೆ ಪಂಚಪ್ರಾಣ ಇವರಿಗೆ. ದುಡ್ಡೇ ದೊಡ್ಡಪ್ಪ ಎನ್ನುತ್ತಾ ಹಣವನ್ನು ಕೂಡಿಟ್ಟುಕೊಂಡು ಅದರಿಂದ ಏನಾದರೂ ಖರೀದಿಸುವುದು ಇವರ ಸ್ವಭಾವ. ಮೂಗಿನ ಮೇಲೆಯೆ ಕೋಪವಿರುವುದರಿಂದ ವೈರಿಗಳ ಪಡೆಯೇ ಇವರ ವಿರುದ್ಧ ಹಲ್ಲು ಕಡಿಯುತ್ತಿರುತ್ತದೆ. ಇವರ ಕೈಕೆಳಗಿನವರಿಂದ ದಬ್ಬಾಳಿಕೆಯಿಂದ ಕೆಲಸ ಮಾಡಿಸಿಕೊಳ್ಳುತ್ತ, ತನಗೆ ಶತ್ರುಗಳೇನಾದರೂ ಮಾಡುತ್ತಾರೆ ಎಂದು ಯಾವಾಗಲೂ ಎಚ್ಚರಿಕೆಯಿಂದಲೇ ಇರುತ್ತಾರೆ.

ಹೆಡ್‌ಫೋನ್ ಹಾಕಿಕೊಂಡು ಇಷ್ಟವಾದ ಹಾಡುಗಳನ್ನು ಕೇಳುತ್ತ ವಾಕಿಂಗ್ ಮಾಡುವಾಗ ನಮ್ಮ ನಡಿಗೆಯ ವೇಗ ನಮಗರಿವಿಲ್ಲದಂತೆಯೇ ಹೆಚ್ಚುತ್ತ ಬೆವರಿನ ಹನಿಗಳು ಹೊರಹೊಮ್ಮುತ್ತಿರುತ್ತವೆ. ಇದೇ ರೀತಿ ಶನಿದೇವನ ಕಾಡಾಟದಲ್ಲಿ ಪರಿಹಾರಗಳನ್ನು ಮಾಡಿಕೊಂಡರೆ ಕಷ್ಟಗಳಿಂದ ಬರುವ ಕಣ್ಣೀರು ನಮಗರಿವಾಗುವುದಿಲ್ಲ.

ಇನ್ನು ನಾವು ಪೂಜಿಸುವ ದೇವರು, ಶನಿಮಹಾರಾಜನ ಬಗ್ಗೆ ಹಣಬಲ, ತೋಳ್ಬಲ ಹೊಂದಿಕೊಂಡು ಅಜ್ಞಾನದಿಂದ, ದುರಂಹಕಾರದಿಂದ, ಸೊಕ್ಕಿನಿಂದ ಅಪ್ಪಿತಪ್ಪಿಯೂ ತಪ್ಪಾಗಿ ಮಾತನಾಡಬೇಡಿ. ಇಲ್ಲಾ ನಾನು ಮಾತನಾಡಿದ್ದೇನೆ ಈ ಮೊದಲು, ನನಗೇನೂ ಆಗಿಲ್ಲ, ಆಗೋದು ಇಲ್ಲಾ. ಬೇಕಾದ್ದಂತಹ ಕಷ್ಟ ಬರಲಿ ಎದುರಿಸುತ್ತೇನೆ ಅಷ್ಟೊಂದು ಧೈರ್ಯ, ಶಕ್ತಿ, ಸಾಮರ್ಥ್ಯ, ಬೆಂಬಲ ನನಗಿದೆ. "ಬರಲಿ ಶನಿ ನನಗೆ" ಏನು ಮಾಡುತ್ತಾನೋ ನೋಡಕೋಳ್ತಿನಿ ಎಂದು ಮಾತನಾಡುವವರು ನಮ್ಮ ನಿಮ್ಮೆಲ್ಲರ ನಡುವೆಯೇ ಇದ್ದಾರೆ. ಇರಲಿ, ನಾವೆಲ್ಲ ಇಂಥಹವರ ಮನೆಯವರಿಗೋಸ್ಕರ ಶನಿದೇವರಲ್ಲಿ ಪ್ರಾರ್ಥಿಸೋಣ, ಅವರ ಮನೆಯವರಿಗೆ ಅವರ ಬಾಡಿನಾದರೂ ಸಿಗಲಿ ಅಂತ.

"ಮೀನ, ಮೇಷ, ಮಿಥುನ, ಕರ್ಕ, ರಾಶಿಗಳವರ ಗುಣಗಳು" ಎಂಬುದು ಮುಂದಿನ ಲೇಖನದಲ್ಲಿ.

ವಾಸ್ತು ಟಿಪ್ಸ್ : ಮನೆಯ ಪೂರ್ವ, ಉತ್ತರ ದಿಕ್ಕಿನಲ್ಲಿ ಭಾರದ ವಸ್ತುಗಳನ್ನು ಇಡದೇ, ದಕ್ಷಿಣ ಮತ್ತು ಪಶ್ಚಿಮಕ್ಕಿಡಿ.

ಶನಿದೇವನ ಕೃಪೆಗೆ : ಶನಿವಾರದಂದು ಆಂಜನೇಯ ಸ್ವಾಮಿಯೊಂದಿಗೆ, ಮಹಾದೇವ ಮತ್ತು ವಿಘ್ನೇಶ್ವರನ ದರ್ಶನ ಮಾಡಿ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 26 : Impact of Sade Sati on zodiac signs. Let's look at how Lord Shani is playing game in the lives of Virgo, Libra, Scorpio and Capricorn zodiac sign people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X