ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ವರ್ಷದೊಳಗಿನ ಮಕ್ಕಳಿಗೆ ಸಾಡೇಸಾತಿ ಬಂದರೆ

By ನಾಗನೂರಮಠ ಎಸ್.ಎಸ್.
|
Google Oneindia Kannada News

"ಆನೆ ಬಲವಿದ್ದರೇನು ಬಂತು, ದೈವ ಬಲವಿಲ್ಲದವನಿಗೆ" ಎಂಬ ಮಾತು ಎಲ್ಲರೂ ಕೇಳಿರುತ್ತಾರೆ. ಈ ಮಾತು ಈಗ್ಯಾಕೆ ಎಂದರೆ, 12 ವರ್ಷದೊಳಗಿನ ಮಕ್ಕಳಿಗೆ ಶನಿದೇವನ ಸಾಡೇಸಾತಿ ಶುರುವಾಯಿತೆಂದರೆ ಅವನ ತಂದೆ- ತಾಯಿಗಳು ಎಷ್ಟೇ ಪವರಫುಲ್ ಇರಲಿ ಅವರೂ ಕೂಡ ಏನೂ ಮಾಡೋಕೆ ಆಗಲ್ಲ. ಏಕೆಂದರೆ ಶನಿದೇವನ ಕಾಡಾಟವೇ ಹಂಗಿರುತ್ತದೆ. ಇದೂ ಅಲ್ಲದೇ ಕೆಲವೊಮ್ಮೆ ಸಾಡೇಸಾತಿಯೊಂದಿಗೆ ಮಕ್ಕಳಿಗೆ ಬಾಲಾರಿಷ್ಠವೂ ಕೂಡಿಬಿಟ್ಟರೆ ಮುಗೀತು. ಅತೀ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಪಡುವ ಪರಿಪಾಟಲು ಕಲ್ಲೆದೆಯವರನ್ನೂ ಕರಗಿಸುತ್ತದೆ. ಇನ್ನೂ ಅವರ ಪಾಲಕರ ಕಣ್ಣೀರು ಕಪಾಳಕ್ಕೆ ಬರಲೇ ಬೇಕಲ್ಲವೇ?

ಹೀಗಾಗಿ, ಈ ವಯಸ್ಸಿನೊಳಗಿನ ಮಕ್ಕಳನ್ನು ಸಾಡೇಸಾತಿಯ ಸಮಯದಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಪಾಲಕರು ಕಾಯಬೇಕು. ಇಲ್ಲವಾದರೆ ಏನಾದರೂ ಅನಾಹುತ ಮಾಡಿಕೊಳ್ಳುವುದೇ ಮಕ್ಕಳ ಉದ್ಯೋಗವಾಗಿರುತ್ತದೆ. ಈ ಬಗ್ಗೆ ಏನೂ ತಿಳಿಯದ ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿ ಅವರನ್ನು ಮತ್ತೊಂದಿಷ್ಟು ಮೊಂಡರನ್ನಾಗಿ ಪಾಲಕರೇ ಮಾಡುತ್ತಾರೆ. ಇದು ಅರಿತು ಮಾಡುವ ತಪ್ಪು ಎನ್ನಬಹುದು. ಇದಕ್ಕೆಂದೇ ಜನ್ಮಜಾತಕದ ಮೂಲಕ ಸಾಡೇಸಾತಿ ಬರುವ ಸಮಯವನ್ನು ಮೊದಲೇ ಗುರ್ತಿಸಿಟ್ಟುಕೊಳ್ಳುವುದು ಬುದ್ಧಿವಂತರ ಲಕ್ಷಣ ಎಂದು ಹೇಳುವುದು.

12 ವರ್ಷದೊಳಗಿನ ಮಕ್ಕಳಿಗೆ ಸಾಮಾನ್ಯವಾಗಿ ಶನಿಕಾಟ ತುಂಬಾ ತ್ರಾಸದಾಯಕವಾಗಿಯೇ ಇರುತ್ತದೆ. ಮಕ್ಕಳಿಗೆ ಈ ಬಗ್ಗೆ ಏನೂ ಗೊತ್ತಾಗುವುದಿಲ್ಲ. ಸುಖಾಸುಮ್ಮನೆ ತಪ್ಪು ಮಾಡಿ ಎಲ್ಲರಿಂದ ಹೊಡೆತ ತಿನ್ನುತ್ತಿರುತ್ತಾರೆ. ಶಾಲೆಯಲ್ಲಿ ಗುರುಗಳಿಂದ, ಸಹಪಾಠಿಗಳಿಂದ, ಮನೆಯಲ್ಲಿ ತಂದೆ-ತಾಯಿಯಿಂದ, ಅಣ್ಣ ತಮ್ಮಂದಿರಿಂದ, ಅಕ್ಕತಂಗಿಯರಿಂದ (ಇದಕ್ಕೇ ಹೇಳುವುದು ಕುಟುಂಬದಲ್ಲಿ ಎಲ್ಲರ ರಾಶಿ ಯಾವುದು ಎಂದು ಮೊದಲೇ ತಿಳಿದುಕೊಂಡಿರಬೇಕು. ಏಕೆಂದರೆ ಚಿಕ್ಕಮಕ್ಕಳು ಹುಡುಗಾಟಿಕೆಯಿಂದ ಜಗಳ ವಿಪರೀತಕ್ಕೆ ಹೋಗಿ ಏಟು ತಿಂದು ಆಸ್ಪತ್ರೆ ಸೇರುವಂತಾಗಬಾರದು!) [ವಯಸ್ಸಿಗೆ ತಕ್ಕಂತೆ ಬರುವ ಶನಿಕಾಟ]

Sade Sati for children below 12 years

ಇನ್ನು ಕೆಲ ಮಕ್ಕಳು ಕಳ್ಳತನದಂತಹ ಕುಕೃತ್ಯಗಳಲ್ಲಿ ಪರಿಣತಿ ಸಾಧಿಸಲು ಪ್ರಯತ್ನಿಸುತ್ತಾರೆ. ಕೆಲವರು ಶಾಲೆ ತಪ್ಪಿಸಿ ಬೀದಿ ಬೀದಿ ಸುತ್ತುತ್ತ ಏನೂ ತಿಳಿಯದೇ ತಿರುಗಾಡುವುದೇ ಒಂದು ಕಾಯಕ ಮಾಡಿಕೊಂಡಿರುತ್ತಾರೆ. ಬೇಕಾದಷ್ಟು ಹಣ ಖರ್ಚು ಮಾಡಿ ಎಂತಹ ದೊಡ್ಡ ಶಾಲೆಗೆ ವಿದ್ಯಾಭ್ಯಾಸಕ್ಕೆ ಕಳಿಸಿದರೂ ಫಲಿತಾಂಶ ಮಾತ್ರ ಶೂನ್ಯ. ಮಕ್ಕಳಿಗೆ ಶನಿಕಾಟವಿದೆ ಎಂದೂ ಕೂಡ ಎಷ್ಟೋ ಜನ ಇಂದಿಗೂ ಕೂಡ ನೋಡಿಕೊಳ್ಳದಷ್ಟು ದಡ್ಡರಿದ್ದಾರೆ. [ಶನಿರಾಜನನ್ನು ಪೂಜಿಸುವುದು ಹೀಗೆ]

ನಮ್ಮ ರಕ್ತ ಹಂಚಿಕೊಂಡು ಹುಟ್ಟಿರುವ ಮಕ್ಕಳನ್ನು ನಾವು ಜೋಪಾನವಾಗಿ ಬೆಳೆಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ನಮ್ಮ ಕರ್ತವ್ಯ. ಅವರು ಯಾವ ಕ್ಷೇತ್ರದಲ್ಲಿ ಯಶಸ್ಸಾಗುತ್ತಾರೆ ಎಂದು ಅವರ ಜನ್ಮಜಾತಕದ ಮೂಲಕ ತಿಳಿದುಕೊಂಡು ಅವರನ್ನು ಆ ಕ್ಷೇತ್ರದಲ್ಲಿ ಬೆಳೆಸಲು ಪ್ರಯತ್ನಿಸಬೇಕು. ಮಕ್ಕಳ ಬಗ್ಗೆ ಏನೂ ಕಾಳಜಿ ವಹಿಸದೆ ಇದ್ದರೆ, ಮುಂದೊಂದು ದಿನ ಅವರಿಂದಾಗಿ ಎಲ್ಲರೆದುರು ತಲೆ ತಗ್ಗಿಸುವ ಪರಿಸ್ಥಿತಿ ಬಂದೇ ಬರುತ್ತದೆ. ಆವಾಗ ನೆನಪಿಸಿಕೊಳ್ಳಬೇಕಾಗುತ್ತದೆ ನಾವೆಲ್ಲಿ ಎಡವಿದ್ದೇವೆ ಎಂದು.

ಯಾಕೆಂದರೆ, ಶನಿಕಾಡಾಟವಿದ್ದಾಗ ಹೆಚ್ಚಿನ ನೋವಿನ ಪರಿಸ್ಥಿತಿ ಮಕ್ಕಳಿಗಾಗುತ್ತಿರುತ್ತದೆ. ಅವರು ಏನೇ ಮಾಡಿದರೂ ಅದರಲ್ಲಿ ತಪ್ಪೇ ಇರುತ್ತವೆ. ಯಾವುದೂ ಸರಿಯಾಗಿ ಮಾಡೋಕೆ ಆಗೋಲ್ಲ. ಎಲ್ಲರಿಂದ ಬೈಯಿಸಿಕೊಳ್ಳದೇ ತಿಂದುಂಡದ್ದು ಮೈಗೆ ಹತ್ತಲ್ವಾ ಎಂದೆನ್ನಿಸಿಕೊಳ್ಳಬೇಕಾಗುತ್ತದೆ. ಮಕ್ಕಳ ಪರಿಸ್ಥಿತಿ ನೋಡಿ ತಂದೆ- ತಾಯಿಯಂದಿರೂ ಕೂಡ ಸಾಕಷ್ಟು ಮಮ್ಮಲ ಮರುಗಬೇಕಾಗುತ್ತದೆ. ಯಾಕೆ ನನ್ನ ಮಕ್ಕಳಿಗೆ ಹೀಗೆ ಆಗುತ್ತಿದೆ ಎಂದು ಚಿಂತೆಯಿಂದ ಕೊರಗಬೇಕಾಗುತ್ತದೆ. ಆದರೆ ಮುಗ್ಧ ಮನಸ್ಸಿನ ಮಕ್ಕಳಿಗೆ ಇದ್ಯಾವುದರ ಪರಿವೇ ಇರುವುದಿಲ್ಲ. ಯಾವುದಕ್ಕೂ, ಏನೂ ಅರಿಯದ ಮಕ್ಕಳ ಸಾಡೇಸಾತಿ ಸಮಯದ ಬಗ್ಗೆ ಮೊದಲೇ ತಿಳೀದುಕೊಂಡು ಅದರ ಮುಂಜಾಗೃತೆ ಹೇಗೆ ಮಾಡಿಕೊಳ್ಳಬೇಕು ಎಂದು ಪ್ಲಾನ್ ಮಾಡಿಕೊಳ್ಳಬೇಕು ಮಕ್ಕಳ ಸುಖ ಬೇಕಿದ್ದರೆ.

ಇನ್ನು ಈಗಂತೂ ತುಲಾ, ವೃಶ್ಚಿಕ, ಕನ್ಯಾ ರಾಶಿಯವರು ಸಾಡೇಸಾತಿಯ ಶನಿದೇವನ ಪ್ರಭಾವದಲ್ಲಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಶನಿದೇವನು ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದಾಗ ಸ್ವಲ್ಪ ಸಿಟ್ಟಿನಲ್ಲಿಯೇ ಇರುತ್ತಾನೆ. ಈಗ ತನ್ನ ಸ್ವಂತ ಕ್ಷೇತ್ರದಲ್ಲಿ 30 ವರ್ಷಗಳ ನಂತರ ಸಂಪೂರ್ಣ ಸಂತಸದಿಂದಿದ್ದಾನೆ. ಅನ್ಯಾಯಕ್ಕೊಳಗಾಗದವರಿಗೆ ನ್ಯಾಯ ಒದಗಿಸುತ್ತಾನೆ. ಮುಂದೆ ಅನ್ಯಾಯ ಮಾಡಿದವರಿಗೆ ಹೆಡಮುರಿ ಕಟ್ಟುತ್ತಾನೆ. ಈಗಲೇ ಕೆಟ್ಟವರ‍್ಯಾರು ಎಂಬುದನ್ನು ನೋಟ್ ಮಾಡಿಟ್ಟುಕೊಳ್ಳಿ ಮುಂದೆ ಅವರ ಪರಿಸ್ಥಿತಿ ಏನಾಗುತ್ತದೆ ಎಂದು ಕಣ್ಣಾರೆ ನೋಡಿ ಶನಿದೇವನ ಪ್ರಭಾವನ್ನು ಅರಿತುಕೊಳ್ಳಿ.

ಇನ್ನು, "ಶನಿರಾಜನಂತೆ ಕೊಡುವವರೂ ಇಲ್ಲ, ಕೆಡಿಸುವವರೂ ಇಲ್ಲ" ಎಂಬ ಮಾತು ಪ್ರಚಲಿತದಲ್ಲಿದೆ. ಇದರರ್ಥ ಮಹಾತ್ಮನು ಕೊಟ್ಟು ನೋಡುತ್ತಾನೆ ಹಾಗೂ ಕೊಟ್ಟಿದ್ದನ್ನು ಕಸಿದುಕೊಂಡು ನೋಡುತ್ತಾನೆ. ಮಹಾತ್ಮನ ಪರೀಕ್ಷೆಯಲ್ಲಿ ಪಾಸಾಗುವವರು ಯಾವುದೆ ಅಡೆತಡೆಯಿಲ್ಲದೆ ಜೀವನ ಸಾಗಿಸುತ್ತಾರೆ.

ಆದರೆ, ಧರ್ಮದಿಂದ ಬಾಳುವುದು ಕೆಲವರಿಗೆ ಸ್ವಲ್ಪ ಕಷ್ಟಕರವೆನಿಸುತ್ತದೆ. ಧರ್ಮದಿಂದ ಬಾಳಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಡೆಯವರೆಗೂ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಹೀಗಾಗಿ ಧರ್ಮದ ಕಷ್ಟಕರ ಜೀವನ ಬೇಡ ಎಂದುಕೊಂಡು ಐಷಾರಾಮಿ ಜೀವನ ಇಷ್ಟಪಡಬೇಡಿ. ಕೆಲ ದುರಾಸೆ ಗುಣದವರು, ಮತ್ತೊಬ್ಬರ ಐಷಾರಾಮಿ ಜೀವನ ನೋಡಿಕೊಂಡು ನಾವು ಯಾಕೆ ಹಾಗಿರಬಾರದು ಎಂದು ಏನೇನೋ ಕನಸು ಕಾಣುತ್ತಾರೆ. ಆದರೆ ಆ ಐಷಾರಾಮಿ ಜೀವನ ಮಾಡುವವರು ಸತ್ಯವಂತ, ಧರ್ಮವಂತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬಹುದು.

ಲಂಚತನ, ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಮೋಸ, ವಂಚನೆ ಮಾಡುತ್ತ ಹಣ ಗಳಿಸಿ ಐಷಾರಾಮಿತನ ಮಾಡುತ್ತಿರುವ ಜನರನ್ನು ನೋಡಿ ಜೀವನ ಮಾಡುವುದನ್ನು ಕಲಿಯಬೇಡಿ. ನೀವೂ ಆ ಹಾದಿ ತುಳಿದು ಮುಂದೊಂದು ದಿನ ನಿಮ್ಮ ಇಡೀ ಕುಟುಂಬವೇ ಬೀದಿ ಪಾಲಾಗುವಂತೆ ಮಾಡಿಕೊಳ್ಳಬೇಡಿ. ಶನಿಕಾಡಾಟ ಅತೀ ಪೀಡಿತವಾಗಿದ್ದರೆ ಕೂಡಲೇ ಸೂಕ್ತವಾದ ಪರಿಹಾರ ಮಾಡಿಕೊಳ್ಳಬೇಕು. ಯಾಕೆಂದರೆ ಒಮ್ಮೊಮ್ಮೆ ಪರಿಹಾರ ಮಾಡಿಕೊಳ್ಳಲು ಕೂಡ ಮನಸ್ಸಾಗದಷ್ಟು ದರಿದ್ರತನ ಮನದಲ್ಲಿ ಮತ್ತು ದೇಹದಲ್ಲಿ ಮನೆ ಮಾಡಿರುತ್ತದೆ.

ವಾಸ್ತು ಟಿಪ್ಸ್ : ಒಂದು ಲೀಟರ್‌ನಷ್ಟು ನೀರನ್ನು ತೆಗೆದುಕೊಂಡು ಅರಳಿ ಮರಕ್ಕೆ ಪ್ರದಕ್ಷಿಣೆ ಮಾಡುವಾಗ ಮರದ ಬುಡಕ್ಕೆ ಹಾಕಿ.

ಶನಿಕೃಪೆಗೆ : ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಮೃತ್ಯುಂಜಯ ಮಂತ್ರ ಪಠಿಸಬೇಕು. ವಾರಕ್ಕೊಮ್ಮೆಯಲ್ಲ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 47 : Impact of Sade Sati on zodiac signs. Lord Shani will trouble children below 12 years too. The parents have to be very careful about their children and take corrective measures, so that children are not affected much.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X