•  

ನೀವೂ ಮೋಸ ಹೋದೀರಿ ಎಚ್ಚರಿಕೆ!

ಮಂಗಳವಾರ, ಮೇ 19, 2009, 12:43 [IST]
Archana Hebbar, Bengaluru
ಇಂಟರ್ನೆಟ್ ಯುಗದಲ್ಲಿ ಯಾವುದೂ ಸುರಕ್ಷಿತವಲ್ಲ. ನಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್, ಬ್ಯಾಂಕ್ ಅಕೌಂಟ್... ಕೊನೆಗೆ ನಮ್ಮ ವೈಯಕ್ತಿಕ ವಿವರಗಳು ಕೂಡ ನಮಗರಿವಿಲ್ಲದಂತೆ ಇಂಟರ್ನೆಟ್ ಪಾಲಾಗಿರುತ್ತವೆ. ಪೊಲೀಸರಿಗೆ ಕೂಡ ಇಂಥ ಅಪರಾಧಗಳು ಹೊಸದಾಗಿದ್ದು, ಮೋಸಗಾರರನ್ನು ಹುಡುಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ನಾವಾದರೂ ಸುಮ್ಮನಿದ್ದರಾದೀತೆ? ಇಂಥ ಅಪರಾಧಗಳ ಕುರಿತು ಜನಜಾಗೃತಿ ಬೆಳೆಸಿ. ಇಂಟರ್ನೆಟ್ ಮುಖಾಂತರವೇ ಜಾಗೃತಿ ಎಲ್ಲರಲ್ಲಿ ಮೂಡಲಿ.

* ಅರ್ಚನಾ ಹೆಬ್ಬಾರ್

ಈ ಶನಿವಾರ, ಬಹುದಿನದಿಂದ ಕೆಟ್ಟು ಹೋಗಿದ್ದ ನಮ್ಮ ಲ್ಯಾಪ್ ಟಾಪನ್ನು ಸರಿಪಡಿಸುವ ಮುಹೂರ್ತ ಬಂದೊದಗಿತ್ತು. ಅದನ್ನು ಸರಿಪಡಿಸಲೋಸುಗ ಜಯನಗರದ ಒಂದು ಅಂಗಡಿ ನುಗ್ಗಿದ್ದಾಯಿತು. ಕೆಲವು ಪರೀಕ್ಷೆಗಳ ನಂತರ ಹಾರ್ಡ್ ಡಿಸ್ಕ್ ಬದಲಿಸಬೇಕೆಂಬ ಸೂಚನೆ ಗಟ್ಟಿಯಾಗತೊಡಗಿತು. ನಮಗೆ ಬೇಕಾದ ಹಾರ್ಡ್ ಡಿಸ್ಕ್ ಆ ಅಂಗಡಿಯಲ್ಲಿ ಇಲ್ಲದ ಕಾರಣ ಫೋನಾಯಿಸಿ, ಬೇರೊಂದು ಕಡೆಯಿಂದ ಅದನ್ನು ಅಂಗಡಿ ಮಾಲೀಕರು ತರಿಸಿದರು. ಹೊಚ್ಚ ಹೊಸ ಹಾರ್ಡ್ ಡಿಸ್ಕನ್ನು ನಮ್ಮ ಕಣ್ಣೆದುರಿಗೇ ಪಾಕೆಟ್ ನ ಸೀಲು ಒಡೆದು ತೆಗೆದು ತೋರಿಸಿ, ಜೋಡಿಸಿ, ಪರೀಕ್ಷಿಸಿ, ಎಲ್ಲವೂ ಸಮರ್ಪಕವಾಗಿದೆಯೆಂದು ಭಾವಿಸಿ, ಅಲ್ಲೇ ಆಪರೇಟಿಂಗ್ ಸಿಸ್ಟಮನ್ನು ಇನ್ ಸ್ಟಾಲ್ ಮಾಡಿ ನೋಡಿದೆವು. ಎಲ್ಲ ಓಕೆ.. ಚಿಂತೆ ಯಾಕೆ ಎಂದು ಭಾವಿಸಿ ಮನೆಗೆ ಬಂದೆವು. ಕಥೆ ಇಲ್ಲಿಗೇ ಮುಗಿಯಲಿಲ್ಲ. ಮುಗಿಯುತ್ತಿದ್ದರೆ ಈ ಲೇಖನ ಬರೆಯುವ ಅವಶ್ಯಕತೆಯೂ ಇರಲಿಲ್ಲ.

ಮನೆಗೆ ಬಂದು ಸರಿಯಾದ ಲಾಪ್ ಟಾಪ್ ನಲ್ಲಿ ಮತ್ತೊಂದಷ್ಟು ಸಾಫ್ಟ್ ವೇರ್ ಗಳನ್ನು ಇನ್ ಸ್ಟಾಲ್ ಮಾಡುವ ಉತ್ಸಾಹದಲ್ಲಿ, ಮತ್ತೆ ಅದನ್ನು ಪರಿಶೀಲಿಸತೊಡಗಿದೆ. ಲಾಪ್ ಟಾಪ್ ನ ಡಿ ಡ್ರೈವ್ ಅನ್ನು ತೆರೆದು ನೋಡಿದಾಗ ನನಗೆ ಸಖೇದಾಶ್ಚರ್ಯವಾಗಿತ್ತು. ಯಾಕೆ ಅಂತೀರಾ? ಯಾರೋ ಒಬ್ಬರ ಹಲವಾರು ಕಡತಗಳು ಅದರಲ್ಲಿದ್ದವು. ಹೊಸ ಹಾರ್ಡ್ ಡಿಸ್ಕ್ ಖಾಲಿಯಾಗಿರಬೇಕಷ್ಟೆ? ಈ ಥರದ ಕಡತಗಳು ಅದರಲ್ಲಿ ಮುಂಚಿನಿಂದಲೂ ಇದೆ ಅಂದ ಮೇಲೆ ಇದು ಹೊಸದಾಗಿರಲು ಹೇಗೆ ಸಾಧ್ಯ? ಮತ್ತೊಮ್ಮೆ ಆ ಕಂಪ್ಯೂಟರ್ ಅಂಗಡಿಗೆ ಫೋನಾಯಿಸಿ, ಬದಲಿಸಿದ ಹಾರ್ಡ್ ಡಿಸ್ಕ್ ಹೊಸತೇ ಅಲ್ಲವೇ ಎಂಬ ಗುಮಾನಿಯನ್ನು ವ್ಯಕ್ತಪಡಿಸಿದೆವು. "ಅದು ಹೊಚ್ಚ ಹೊಸದೇ" ಎಂಬ ಉತ್ತರ ದೊರಕಿತು.

ಡಿ ಡ್ರೈವ್ ನ ಕಡತಗಳಲ್ಲಿ ಏನೇನಿದೆ ಎನ್ನುತ್ತೀರಾ? 1. ಬ್ಯಾಂಕ್ ಸ್ಟೇಟ್ ಮೆಂಟ್ ಗಳು 2. ಕ್ರೆಡಿಟ್ ಕಾರ್ಡ್ ಸ್ಟೇಟ್ ಮೆಂಟ್ ಗಳು 3. ಷೇರು ವ್ಯವಹಾರದ ಅಂಕಿ ಅಂಶ 4. ಗೃಹಸಾಲದ ವಿವರಗಳು 5. ಕುಟುಂಬದ ಛಾಯಾಚಿತ್ರಗಳು 6. ಆಫೀಸಿನ ವಿವರಗಳು.

ಇತ್ತೀಚೆಗೆ 'Identity theft' , ಅಂತರ್ಜಾಲದಲ್ಲಿ ಆಗುವ ಮೋಸ ಹೆಚ್ಚಾಗಿವೆಯಷ್ಟೆ. ನನ್ನೆದುರು ಒಂದು ಪ್ರತ್ಯಕ್ಷ ನಿದರ್ಶನವಿತ್ತು.

ಆ ಕಡತಗಳಲ್ಲಿ ಆ ವ್ಯಕ್ತಿಯ ದೂರವಾಣಿ ಸಂಖ್ಯೆಯನ್ನು ಪಡೆದು ಅವರಿಗೆ ಫೋನಾಯಿಸಿ, ಎಲ್ಲ ವಿಷಯಗಳನ್ನು ತಿಳಿಸಿ, ಅವರ ಅಂತರ್ಜಾಲದ ಪಾಸ್ ವರ್ಡ್ಗಳನ್ನು ತಕ್ಷಣವೇ ಬದಲಾಯಿಸಲು ಆಗ್ರಹಿಸಿದೆವು. ಈ ವಿಷಯ ತಿಳಿದು ಅವರಿಗೂ ಗಾಬರಿಯಾಯಿತೆಂದು ಹೊಸದಾಗಿ ಹೇಳಬೇಕೆ?

ಇಲ್ಲಿ ಇಬ್ಬರಿಗೆ ಮೋಸವಾಗಿದೆ. 1. ಹೊಸ ಹಾರ್ಡ್ ಡಿಸ್ಕ್ ನ ಬೆಲೆ ತೆತ್ತು ಹಳೆಯದನ್ನು ಪಡೆದ ನನಗೆ 2. ಈ ಪರಿಯ ವೈಯಕ್ತಿಕ ದಾಖಲೆಗಳು ಯಾರದಾಗಿದ್ದವೋ ಅವರಿಗೆ. ಹಾಗೆ ನೋಡಹೋದರೆ ಮೊದಲನೆಯದ್ದಕ್ಕಿಂತ ಎರಡನೆಯದು ಅತ್ಯಂತ ಗಂಭೀರ ವಿಷಯ. ಎಲ್ಲಾ ತರಹದ ವಿಷಯಗಳೂ ಒಂದು ಚಿಕ್ಕ ಡಿಸ್ಕ್ ನಲ್ಲಿ ಅಡಕವಾಗಿಸಬಹುದಾದ ಈ ಕಾಲದಲ್ಲಿ ಸುರಕ್ಷತೆಯ ಕೊರತೆ ಎದ್ದು ಕಾಣುತ್ತಿದೆ.

ಕಂಪ್ಯೂಟರ್ ನಲ್ಲಿ ತಕ್ಕಮಟ್ಟಿನ ಸಾಕ್ಷರರಾಗಿದ್ದರೂ ಮೋಸ ಹೋಗುವ ಭಯ ಬೆಂಗಳೂರಿನಲ್ಲಿ ಇಲ್ಲದಿಲ್ಲ. ಈ ಥರದ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಗಮನಕ್ಕೆ ತಂದು ಜನರಲ್ಲಿ ಸೂಕ್ತ ಜಾಗೃತಿಯನ್ನು ಮೂಡಿಸುವುದು ಅತ್ಯಗತ್ಯ. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ವೈಯಕ್ತಿಕ ವಿವರಗಳನ್ನು ಒಂದೆಡೆ ಕಲೆ ಹಾಕಿದಾಗ ಅದಕ್ಕೆ ತಕ್ಕ ಭದ್ರತೆಯನ್ನು ಕಲ್ಪಿಸುವುದು ಇವತ್ತಿನ ಅಗತ್ಯ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದರಲ್ಲಿ ತುಂಬಾ ಸಮಯ ಹಿಡಿಯುವುದಿಲ್ಲ!
User Comments
ಕೆ ಏನ್ ಶಿವರಾಜ 25 Jul 2010 11:31 pm
ಪೋಲೀಸ್ ಗೆ ದೂರು ಕೊದಬೇಕಿತ್ತಲ್ಲವೇ?
ನಿತ್ಯಸತ್ಯ 18 May 2010 01:52 pm
ನನಗೊಮ್ಮೆ ಹೀಗೆ ಆಗಿತ್ತು. ನಾನು ಸೋನಿ USB ಪೆನ್ ಡ್ರೈವ್ ತಗೊಂಡೆ. ಅದು brand new ಆಗಿತ್ತು. ಆದರೆ ಒಳಗಡೆ ನೋಡಿದಾಗ mp3 ಸೊಂಗ್ಸ್ ತುಂಬಿತ್ತು. ಡಿಲೀಟ್ ಮಾಡಿ use ಮಾಡ್ತಾ ಇದ್ದೀನಿ.
[ ಅಭಿಪ್ರಾಯ ಬರೆಯಿರಿ ]
IPL, Himachal Pradesh Cricket Association Stadium, Dharmasala
Chennai Super Kings: 120 / 7, 20 Overs
Play stopped for innings.
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article